Advertisement
ಕ್ವಾಡ್ ನಾಯಕರನ್ನು ಬೈಡೆನ್ ವೇದಿಕೆಗೆ ಸ್ವಾಗತಿಸುತ್ತಿದ್ದರು. ಈ ವೇಳೆ ಆಸ್ಟ್ರೇಲಿಯಾ, ಜಪಾನ್ ಪ್ರಧಾನಿಗಳನ್ನು ಪರಿಚಯಿಸಿ, ಮೋದಿ ಅವರ ಸರದಿ ಬರುವ ವೇಳೆಗೆ ಅವರ ಹೆಸರನ್ನೇ ಮರೆತಿದ್ದಾರೆ. “ನಾನೀಗ ಮುಂದಿನ ಗಣ್ಯರನ್ನು ಸ್ವಾಗತಿಸುತ್ತೇನೆ ಎಂದು ಹೇಳಿ, ಬಳಿಕ ಯಾರು? ಮುಂದಿನ ಗಣ್ಯರು ಯಾರು’ ಎಂದು ಪ್ರಶ್ನಿಸಿ ಮುಜುಗರಕ್ಕೀಡಾಗಿದ್ದಾರೆ. ಮೋದಿ ಅವರನ್ನು ವೇದಿಕೆಗೆ ಸ್ವಾಗತಿಸಿದ ಬಳಿಕವೂ ” ಇವರು ನಮ್ಮಂತೆ ಚಿಕ್ಕ ಮತ್ತು ಕಡಿಮೆ ಜನಸಂಖ್ಯೆಯ ದೇಶದಿಂದ ಬಂದವರು’ ಎಂದು ಹೇಳಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಡ್ರೋನ್, ಸೆಮಿಕಂಡಕ್ಟರ್ ಸೇರಿದಂತೆ ಹಲವು ವಲಯಗಳಲ್ಲಿ ಅಮೆರಿಕದೊಂದಿಗೆ ಸಹಭಾಗಿತ್ವ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡೆಲಾವೇರ್‌ನ ಕ್ವಾಡ್ ಶೃಂಗದ ನೇಪಥ್ಯದಲ್ಲಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಹೆಚ್ಚುತ್ತಿರುವ ಚೀನಾದ ಸೇನಾ ಪ್ರಾಬಲ್ಯವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ರಕ್ಷಣಾ ಹಾರ್ಡ್‌ವೇರ್‌ಗಳ ಪೂರೈಕೆ, ಜೆಟ್ ಎಂಜಿನ್‌ಗಳು, ಶಸ್ತ್ರಾಸ್ತ್ರಗಳು ಸೇರಿದಂತೆ ಭಾರತ-ಅಮೆರಿಕ ರಕ್ಷಣಾ ಕೈಗಾರಿಕೆ ಸಹಕಾರ ಮಾರ್ಗಸೂಚಿಗೆ ಸಂಬಂಧಿಸಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.
Related Articles
ಅಮೆರಿಕದ ಜನರಲ್ ಅಟೋಮಿಕ್ಸ್ ಕಂಪನಿಯಿಂದ 31 ಎಂಕ್ಯೂ-9ಬಿ ವಿಮಾನಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಪರಿಕರಗಳನ್ನು ಖರೀದಿಸುವ ನಿಟ್ಟಿನಲ್ಲೂ ಭಾರತ ಹೆಜ್ಜೆಯಿಟ್ಟಿದೆ. ಈ ವಿಮಾನಗಳು ಭಾರತೀಯ ಸಶಸ್ತ್ರ ಪಡೆಗಳ ಗುಪ್ತಚರ, ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ಡ್ರೋನ್‌ಗಳನ್ನು “ಹಂಟರ್-ಕಿಲ್ಲರ್’ ಪ್ರಿಡೇಟರ್ ಡ್ರೋನ್‌ಗಳೆಂದು ಕರೆಯುತ್ತಾರೆ. ದೂರದಲ್ಲಿ ಕುಳಿತು ಕಂಟ್ರೋಲರ್‌ನ ಒಂದು ಬಟನ್ ಒತ್ತಿದರೆ ಸಾಕು, ಶತ್ರುಗಳ ಮೇಲೆ ಕ್ಷಿಪಣಿಗಳ ಮಳೆಯೇ ಸುರಿಯುವಂತೆ ಮಾಡುವ ಸಾಮರ್ಥ್ಯ ಈ ವ್ಯವಸ್ಥೆಗಿದೆ. ಇವುಗಳನ್ನು ಜಗತ್ತಿನಲ್ಲೇ ಅತ್ಯಂತ ಮಾರಣಾಂತಿಕ ರೀಪರ್ ಡ್ರೋನ್ ಎಂದೂ ಕರೆಯಲಾಗುತ್ತದೆ. 25,000 ಕೋಟಿ ರೂ. ಮೊತ್ತದಲ್ಲಿ ಇಂಥ 31 ಡ್ರೋನ್‌ಗಳನ್ನು ಖರೀದಿಸಲು ಭಾರತ ಮುಂದಾಗಿದ್ದು, ಅವುಗಳ ದರದ ವಿಚಾರದಲ್ಲಿ ಮಾತುಕತೆ ನಡೆಯುತ್ತಿದೆ.
Advertisement
ಬಾಹ್ಯಾಕಾಶದಿಂದ ಸೆಮಿಕಂಡಕ್ಟರ್‌ವರೆಗೆ: ಇದೇ ವೇಳೆ, ಬಾಹ್ಯಾಕಾಶ, ಸೆಮಿಕಂಡಕ್ಟರ್‌ಗಳು ಮತ್ತು ಸುಧಾರಿತ ದೂರಸಂಪರ್ಕ ಕ್ಷೇತ್ರಗಳಲ್ಲಿ ವ್ಯೂಹಾತ್ಮಕ ಸಹಕಾರ ವಿಸ್ತರಿಸುವ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಕೋಲ್ಕತ್ತಾದಲ್ಲಿ ಸೆಮಿಕಂಡಕ್ಟರ್ ಸ್ಥಾವರ ಸ್ಥಾಪಿಸುವ ಕುರಿತೂ ಚರ್ಚಿಸಲಾಗಿದೆ.
ಮೋದಿ ಭೇಟಿ: 297 ಪ್ರಾಚ್ಯ ವಸ್ತುಗಳು ಭಾರತಕ್ಕೆ ವಾಪಸ್ವಿಲಿ¾ಂಗ್‌ಟನ್: ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ನಡುವೆಯೇ 297 ಅಮೂಲ್ಯ ಪ್ರಾಚ್ಯವಸ್ತುಗಳನ್ನು ಮರಳಿಸಲು ಅಮೆರಿಕ ನಿರ್ಧರಿಸಿದೆ. ವಾಪಸಾಗಿ ರುವ ವಸ್ತುಗಳಲ್ಲಿ ಕ್ರಿಸ್ತಪೂರ್ವ 10 ಅಥವಾ 11ನೇ ಶತಮಾನದ ಜೈನ ತೀರ್ಥಂಕರರ ವಿಗ್ರಹ, ಕೃಷ್ಣನ ವಿಗ್ರಹಗಳು ಸೇರಿವೆ. ಬೈಡೆನ್‌ಗೆ ಬೆಳ್ಳಿಯ ರೈಲು ಗಿಫ್ಟ್
ನವದೆಹಲಿ: ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರಿಗೆ ಲೋಹ ಕೆತ್ತನೆಯ ಪ್ರತೀಕದಂತಿರುವ ಬೆಳ್ಳಿಯ ಕರಕುಶಲ ರೈಲೊಂದರ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಶೇ.92.5ರಷ್ಟು ಬೆಳ್ಳಿಯಿಂದ ನಿರ್ಮಾಣವಾದ ಉಗಿಬಂಡಿ ಮಾದರಿಯ ಈ ರೈಲಿನ ಬೋಗಿಗಳ ಮೇಲೆ ಡೆಲ್ಲಿ-ಡೆಲಾವರ್ ಎಂದು ಬರೆದಿದ್ದರೆ, ಎಂಜಿನ್ ಭಾಗದಲ್ಲಿ ಇಂಡಿಯನ್ ರೈಲ್ವೆಸ್ ಎಂದು ಬರೆಯಲಾಗಿದೆ. ಬೈಡೆನ್ ಪತ್ನಿಗೆ ಕಾಗದದ ಪೆಟ್ಟಿಗೆಯಲ್ಲಿರಿಸಿದ್ದ ಕಾಶ್ಮೀರದ ಸಾಂಪ್ರದಾಯಕ ಪಶ್ಮೀನಾ ಶಾಲನ್ನು ಮೋದಿ ಉಡುಗೊರೆಯಾಗಿ ನೀಡಿದರು.
ಮೋದಿ ಜತೆಗಿನ ಮಾತುಕತೆ ವೇಳೆ ಬೈಡೆನ್ ವಿಶ್ವಸಂಸ್ಥೆ ಸುಧಾರಣೆಯ ಅಗತ್ಯತೆ ಕುರಿತೂ ಪ್ರಸ್ತಾಪಿಸಿದ್ದಾರೆ. ಜತೆಗೆ ವಿಶ್ವಸಂಸ್ಥೆಯ ಸುಧಾರಿತ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡುವಲ್ಲಿ ಅಮೆರಿಕದ ಸದಾ ಕಾಲ ಬೆಂಬಲ ನೀಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದಾರೆ. ಕ್ವಾಡ್ ಉಳಿಯಲಿದೆ: ಚೀನಾಗೆ ಟಾಂಗ್
“ಕ್ವಾಡ್ ಒಕ್ಕೂಟವು ಯಾರ ವಿರುದ್ಧವೂ ರಚನೆಯಾದದ್ದಲ್ಲ. ನಿಯಮ ಆಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆ ರೂಪಿಸುವ, ಸಮಗ್ರತೆಗೆ ಗೌರವ ನೀಡುವ, ಎಲ್ಲ ವಿಚಾರಗಳನ್ನೂ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಇದು ರಚನೆಯಾಗಿದೆ. ಮುಕ್ತ, ಎಲ್ಲರನ್ನೊಳಗೊಂಡ ಇಂಡೋ- ಪೆಸಿಫಿಕ್ ನಮ್ಮ ಆದ್ಯತೆಯಾಗಿದೆ. ಕ್ವಾಡ್ ಸದಾಕಾಲ ಉಳಿಯುತ್ತದೆ’ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಚೀನಾಗೆ ಟಾಂಗ್ ನೀಡಿದ್ದಾರೆ. ಕ್ಯಾನ್ಸರ್ ತಡೆಗೆ 62.60 ಕೋಟಿ ರೂ.
ಗರ್ಭಕಂಠ ಕ್ಯಾನ್ಸರ್ ನಿಗ್ರಹದ ಮೂಲಕ ಇಂಡೋ-ಪೆಸಿಫಿಕ್ ಪ್ರದೇಶಗಳಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸುವ ಉದ್ದೇಶದಿಂದ “ಕ್ವಾಡ್ ಕ್ಯಾನ್ಸರ್ ಮೂನ್‌ಶಾಟ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಪ್ರದೇಶದಲ್ಲಿ ಕ್ಯಾನ್ಸರ್ ಪರೀಕ್ಷೆ, ತಪಾಸಣೆ ಮತ್ತು ರೋಗಪತ್ತೆಗಾಗಿ 62.60 ಕೋಟಿ ರೂ. ಅನುದಾನವನ್ನೂ ಪ್ರಧಾನಿ ಮೋದಿ ಘೋಷಿಸಿದ್ದಾರೆ.