ಬಂದಾರ್ ಸೆರಿ ಬಿಗಾವನ್: ಬ್ರೂನೈ ದೇಶದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ(ಸೆ 4) ರಂದು ಅಲ್ಲಿನ ದೊರೆ ಹಾಜಿ ಹಸನಲ್ ಬೊಲ್ಕಿಯಾ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಎಲ್ಲಕ್ಕಿಂತಲೂ ಅಲ್ಲಿನ ಸಿರಿವಂತಿಕೆಯೇ ಹೆಚ್ಚು ಸುದ್ದಿಯಾಗಿದೆ.
ಬ್ರೂನೈ ರಾಜಧಾನಿ ಬಂದಾರ್ ಸೆರಿ ಬಿಗಾವನ್‌ನಲ್ಲಿ ಮಹತ್ವದ ಮಾತುಕತೆ ನಡೆಸಿದ್ದು,ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರನ್ನು ಭೇಟಿ ಮಾಡಿ ಸಂತೋಷವಾಗಿದೆ. ನಮ್ಮ ಮಾತುಕತೆಗಳು ವಿಶಾಲವಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಭದ್ರಪಡಿಸುವ ಮಾರ್ಗಗಳನ್ನು ಒಳಗೊಂಡಿವೆ. ವ್ಯಾಪಾರ ಸಂಬಂಧಗಳು, ವಾಣಿಜ್ಯ ಸಂಪರ್ಕಗಳು ಮತ್ತು ಜನರಿಂದ ಜನರಿಗೆ ವಿನಿಮಯವನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ’ ಎಂದು ಬರೆದಿದ್ದಾರೆ.
ಪ್ರಧಾನಿ ಮೋದಿ ಒಮರ್ ಅಲಿ ಸೈಫುದ್ದೀನ್ ಮಸೀದಿಗೆ ಭೇಟಿ ನೀಡಿದರು. ಭಾರತೀಯ ಹೈಕಮಿಷನ್‌ನ ಚಾನ್ಸರಿ ಕಟ್ಟಡವನ್ನು ಉದ್ಘಾಟಿಸಿ, ಭಾರತೀಯ ಸಮುದಾಯದ ಜತೆ ಸಂವಾದ ನಡೆಸಿದರು.
ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ದೊರೆ
ದಕ್ಷಿಣ ಚೀನಾ ಸಮುದ್ರದಿಂದ ಸುತ್ತುವರೆದಿರುವ ಬ್ರೂನೈ ದ್ವೀಪ ರಾಷ್ಟ್ರ ಮಲೇಷ್ಯಾಕ್ಕೆ ನೆರೆಯ ರಾಷ್ಟ್ರವಾಗಿದೆ. ಸುಲ್ತಾನ ತನ್ನ ಶ್ರೀಮಂತಿಕೆಯಿಂದ ಜಗತ್ತಿನ ಗಮನ ಸೆಳೆದಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯವೇ 2.88 ಲಕ್ಷ ಕೋಟಿ ರೂ!. ಸುಲ್ತಾನ ಹಾಜಿ ಹಸನಲ್ ಬೊಲ್ಕಿಯಾ ತಮ್ಮ 21ನೇ ವಯಸ್ಸಿನಲ್ಲಿ ಅಂದರೆ 1967ರಲ್ಲಿ ಬ್ರೂನೈನ ರಾಜರಾಗಿದ್ದಾರೆ.
ಕಾರು ವ್ಯಾಮೋಹಿಯಾಗಿರುವ ಬೊಲ್ಕಿಯಾ ಬಳಿ 7,000 ಕಾರುಗಳಿದ್ದು, ಈ ಪೈಕಿ ಅತ್ಯಂತ ದುರಿಯಾದ 600 ರೋಲ್ಸ್ ರಾಯ್ಸ್, 300 ಫೆರಾರಿ ಕಾರುಗಳಿವೆ. 200 ಕುದುರೆಗಳಿಗೆ ಹವಾನಿಯಂತ್ರಿತ ಕೋಣೆಗಳಿವೆ.
ದೊರೆ ಬಳಿ 3,000 ಕೋ. ರೂ. ಮೌಲ್ಯದ ಬೋಯಿಂಗ್ ವಿಮಾನವಿದ್ದು, ಇದರಲ್ಲಿ ಬಂಗಾರದ ಶೌಚಾಲಯ ಇದೆ!. ಜತೆಗೆ ಖಾಸಗಿ ಜೆಟ್‌ಗಳು ಕೂಡ ಇವೆ. 20 ಲಕ್ಷ ಚದರ ಅಡಿಯಲ್ಲಿ ತಲೆ ಎತ್ತಿರುವ ಇಸ್ತಾನಾ ನೂರುಲ್ ಇಮಾನ್ ಬೃಹತ್ ಬಂಗ್ಲೆ ಮೌಲ್ಯ 2,250 ಕೋಟಿ ರೂ. ಇದು 1,700 ಕೋಣೆ, 257 ಬಚ್ಚಲುಮನೆ, 5 ಈಜುಕೊಳ ಮತ್ತು ಕಟ್ಟಡ ಗುಮ್ಮಟ್ಟಕ್ಕೆ ಚಿನ್ನದ ಲೇಪನವಿದೆ.