ಲಕ್ನೋ: ಐದು ವರ್ಷಗಳ ಹಿಂದೆ ಉತ್ತರ ಪ್ರದೇಶವು ದಾಂಡಿಗರ ಮತ್ತು ದಂಗೆಕೋರರ ರಾಜ್ಯ ಆಗಿತ್ತು. ಅವರು ಹೇಳಿದ್ದೇ ಕಾನೂನು, ಮಾಡಿದ್ದೇ ಆಡಳಿತ ಎನ್ನುವಂಥ ದುಃಸ್ಥಿತಿ ಇತ್ತು. ಮಾಫಿಯಾ ರಾಜ್‌ಗೆ ಯೋಗಿ ಆದಿತ್ಯನಾಥ್ ಅಂತ್ಯ ಹಾಡಿದ್ದು, ಉ.ಪ್ರ.ದಲ್ಲಿ ನೆಮ್ಮದಿ ಮನೆಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ಉ.ಪ್ರ.ದಲ್ಲಿ ಚುನಾವಣೆಯ ಮೊದಲ ವರ್ಚುವಲ್ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ತಮ್ಮ ಭಾಷಣದುದ್ದಕ್ಕೂ ಸಮಾಜವಾದಿ ಪಕ್ಷದ ವಿರುದ್ಧ ವಾಗ್ಧಾಳಿ ನಡೆಸಿದರು.
“ಉತ್ತರ ಪ್ರದೇಶದಲ್ಲಿ ಹಿಂದೆ ಆಡಳಿತ ನಡೆಸುತ್ತಿದ್ದವರು ದಂಗೆ ಆಯೋಜಿಸಿ, ಸಂಭ್ರಮ ಆಚರಿಸುತ್ತಿದ್ದರು. ವ್ಯಾಪಾರಿಗಳನ್ನು ಲೂಟಿ ಮಾಡುತ್ತಿದ್ದರು. ಹೆಣ್ಮಕ್ಕಳು ಮನೆಯಿಂದ ಹೊರಗೆ ಕಾಲಿಡಲೂ ಅಂಜುತ್ತಿದ್ದರು. ಆಗ ಸರ್ಕಾರದ ಆಶ್ರಯದಲ್ಲೇ ಮಾಫಿಯಾ ಮುಕ್ತವಾಗಿ ನಡೆಯುತ್ತಿತ್ತು’ ಎಂದು ಆರೋಪಿಸಿದರು.
ಪ್ರತಿಭೆಗೆ ಗೌರವವಿಲ್ಲ: “ಪ್ರತೀಕಾರ ತೀರಿಸಿಕೊಳ್ಳುವುದೇ ಆ ದಂಗೆಕೋರರ ರಾಜಕೀಯ ಸಿದ್ಧಾಂತ. ನಾನು ಚೆನ್ನಾಗಿ ಬಲ್ಲೆ.. ಉತ್ತರ ಪ್ರದೇಶದ ಜನತೆ ದಂಗೆಕೋರರ ವಿರುದ್ಧ ಖಂಡಿತಾ ಜಾಗೃತರಾಗಲಿದ್ದಾರೆ. ದೇಶೀ ಲಸಿಕೆ ಮೇಲೇ ನಂಬಿಕೆ ಇಡದವರು, ಲಸಿಕೆ ಬಗ್ಗೆ ವದಂತಿ ಹಬ್ಬಿಸುವವರು ಯುವಕರ ಪ್ರತಿಭೆಯನ್ನು ಇನ್ನೆಲ್ಲಿ ಗೌರವಿಸುತ್ತಾರೆ?’ ಎಂದು ಪರೋಕ್ಷವಾಗಿಅಖಿಲೇಶ್ ಯಾದವ್ ವಿರುದ್ಧ ವಾಗ್ಬಾಣ ಹರಿಸಿದರು.
ಘಟಾನುಘಟಿಗಳಿಂದ ನಾಮಪತ್ರ: ಪಂಚರಾಜ್ಯ ಚುನಾವಣೆಯ ಪ್ರತಿಷ್ಠಿತ ಕಣಗಳಲ್ಲಿ ಸೋಮವಾರ ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ. ಎಸ್ಪಿ ಅಭ್ಯರ್ಥಿ ಅಖಿಲೇಶ್ ಯಾದವ್ (ಕರ್ಹಾಲ್ ಕ್ಷೇತ್ರ), ಪಂಜಾಬ್ ಸಿಎಂ- ಕಾಂಗ್ರೆಸ್ ಮುಖಂಡ ಚರಣ್‌ಜಿತ್ ಸಿಂಗ್ ಚನ್ನಿ (ಭದೌರ್), ಶಿರೋಮಣಿ ಅಕಾಲಿದಳ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ (ಜಲಾಲಾಬಾದ್) ನಾಮಪತ್ರ ಸಲ್ಲಿಸಿದ್ದಾರೆ.
ಅಕಾಲಿದಳದ ಹಿರಿಯ ನಾಯಕ, 94 ವರ್ಷದ ಪ್ರಕಾಶ್ ಸಿಂಗ್ ಬಾದಲ್, ಲಂಬಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ದೇಶದ ಅತ್ಯಂತ ಹಿರಿಯ ಅಭ್ಯರ್ಥಿ ಎಂದೆನ್ನಿಸಿಕೊಂಡಿದ್ದಾರೆ.
ಉತ್ಪಲ್‌ಗೆ ಶಿವಸೇನೆ ಬೆಂಬಲ
ಗೋವಾದಲ್ಲಿ ಬಿಜೆಪಿಗೆ ಶಿವಸೇನೆ ಭರ್ಜರಿ ಟಕ್ಕರ್ ಕೊಟ್ಟಿದ್ದು, ಉತ್ಪಲ್ ಪರಿಕ್ಕರ್ ಎದುರಿದ್ದ ಪಕ್ಷದ ಅಭ್ಯರ್ಥಿಯನ್ನು ಹಿಂಪಡೆದಿದೆ. “ನಾವು ನಮ್ಮ ಮಾತಿಗೆ ಬದ್ಧರಾಗಿದ್ದೇವೆ. ಪಣಜಿಯಲ್ಲಿ ಪಕ್ಷದ ಅಭ್ಯರ್ಥಿ ಶೈಲೇಂದ್ರ ಸ್ಪರ್ಧಿಸುತ್ತಿಲ್ಲ. ಪಣಜಿಯಲ್ಲಿನ ಹೋರಾಟ ನಮಗೆ ಚುನಾವಣೆಗಿಂತಲೂ ಹೆಚ್ಚು. ಗೋವಾದ ರಾಜಕೀಯವನ್ನು ಸ್ವತ್ಛಗೊಳಿಸುವುದೇ ನಮ್ಮ ಮುಖ್ಯ ಗುರಿ’ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಟ್ವೀಟಿಸಿದ್ದಾರೆ.