ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಮೋದಿ ಅವರು ಇಂದು ಮುಂಜಾನೆ ಅಸುನೀಗಿದರು. ತಾಯಿಯ ನಿಧನದ ಸುದ್ದಿ ತಿಳಿದ ಕೂಡಲೇ ಗಾಂಧಿನಗರಕ್ಕೆ ಆಗಮಿಸಿದ ಪಿಎಂ ಮೋದಿ ತಾಯಿಯ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡರು.
ತಮ್ಮ ತಾಯಿ ಹೀರಾಬೆನ್ ಮೋದಿಯವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ನಂತರ, ಪ್ರಧಾನಿ ಮೋದಿ ಅವರು ಅಹಮದಾಬಾದ್ ನ ರಾಜಭವನಕ್ಕೆ ತಲುಪಿದರು. ಪಶ್ಚಿಮ ಬಂಗಾಳದ ಹೌರಾ ರೈಲು ನಿಲ್ದಾಣದಿಂದ ಅವರು ಉದ್ಘಾಟಿಸಬೇಕಿದ್ದ ವಂದೇ ಭಾರತ್ ರೈಲಿಗೆ ವರ್ಚುವಲ್ ಆಗಿ ಫ್ಲ್ಯಾಗ್ ಆಫ್ ಮಾಡಿದರು. ವೈಯಕ್ತಿಕ ನಷ್ಟದ ನಡುವೆಯೂ ಪ್ರಧಾನಮಂತ್ರಿಯವರು ತಮ್ಮ ಕರ್ತವ್ಯವನ್ನು ವಹಿಸಿಕೊಂಡರು.
ವರ್ಚುವಲ್ ಆಗಿ ಭಾಷಣ ಮಾಡಿದ ಅವರು ‘ಯಾವಾಗಲೂ ತಮ್ಮ ರಾಷ್ಟ್ರಕ್ಕೆ ಆದ್ಯತೆ ನೀಡುವ ಬಂಗಾಳದ ಜನರಿಂದ ನಾನು ಸ್ಫೂರ್ತಿ ಪಡೆದಿದ್ದೇನೆ’ ಎಂದು ಹೇಳಿದರು. ರಾಜ್ಯಕ್ಕೆ ಬರಲಾಗದೆ ಇದ್ದಿದ್ದಕ್ಕೆ ರಾಜ್ಯದ ಜನತೆಗೆ ಕ್ಷಮೆ ಕೇಳಿದರು.
ಇದನ್ನೂ ಓದಿ:ರಿಷಭ್ ಪಂತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ
ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ರೈಲಿನ ಫ್ಲ್ಯಾಗ್‌ಆಫ್ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದಂತೆ, ರಾಜ್ಯದ ಸಿಎಂ ಮಮತಾ ಬ್ಯಾನರ್ಜಿ ಅವರು ಹೀರಾಬೆನ್ ಮೋದಿಯವರ ದುಃಖದ ನಿಧನಕ್ಕೆ ಸಂತಾಪ ಸೂಚಿಸಿದರು. ‘ತಾಯಿಗೆ ಪರ್ಯಾಯ ಬೇರೊಬ್ಬರಿಲ್ಲ’ ಎಂದು ಹೇಳಿದ ಮಮತಾ ಬ್ಯಾನರ್ಜಿ ಅವರು ನಿಗದಿತ ಕಾರ್ಯಕ್ರಮಗಳನ್ನು ಮೊಟಕುಗೊಳಿಸುವುದಾಗಿ ಹೇಳಿದರು. ದೊಡ್ಡ ನಷ್ಟ ಅನುಭವಿಸಿದ ಪ್ರಧಾನಿ ಮೋದಿ ಅವರು ಇಂದು ವಿಶ್ರಾಂತಿ ತೆಗೆದುಕೊಳ್ಳಲಿ ಎಂದರು.