ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ಗೆ ಸೋಮವಾರ ಬಂದಿಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ರೆಡ್ ಕಾರ್ಪೆಟ್ ಸ್ವಾಗತದ ನಂತರ ಅಹಮದಾಬಾದ್ ನಿಂದ ರೋಡ್ ಶೋ ಮೂಲಕ ತೆರಳಿ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ವಿಮಾನ ನಿಲ್ದಾಣದಿಂದ ಸಾಬರ್ ಮತಿ ಆಶ್ರಮದವರೆಗೆ ಟ್ರಂಪ್, ಮೋದಿ 22 ಕಿಲೋ ಮೀಟರ್ ದೂರದವರೆಗೆ ರೋಡ್ ಶೋ ಆರಂಭವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿಯೂ ಜನರು ಕೈಬೀಸುವ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ರೋಡ್ ಶೋ ಮೂಲಕ ಸಾಬರಮತಿ ಆಶ್ರಮಕ್ಕೆ ಆಗಮಿಸಿದ ಟ್ರಂಪ್ ದಂಪತಿಯನ್ನು ಶಾಲು ಹೊದಿಸಿ ಸ್ವಾಗತಿಸಲಾಯಿತು. ಪ್ರಧಾನಿ ಮೋದಿಯಿಂದ ಆಶ್ರಮದ ಬಗ್ಗೆ ಟ್ರಂಪ್ ಗೆ ವಿವರಣೆ. ಮಹಾತ್ಮ ಗಾಂಧಿಯ ಭಾವಚಿತ್ರಕ್ಕೆ ಹಾರ ಹಾಕಿ ನಮನ ಸಲ್ಲಿಸಿದರು.
ಸಬರಮತಿ ಆಶ್ರಮದ ಭೇಟಿ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ಜಗತ್ತಿನ ಅತಿ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೊಟೆರಾ ಸ್ಟೇಡಿಯಂನತ್ತ ತೆರಳಿದ್ದಾರೆ.
ರೋಡ್ ಶೋ ನಂತರ ಗುಜರಾತ್ ನ ಮೊಟೆರಾದಲ್ಲಿ ಪುನರ್ ನಿರ್ಮಾಣಗೊಂಡಿರುವ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ “ನಮಸ್ತೆ ಟ್ರಂಪ್” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಮತ್ತು ಟ್ರಂಪ್ ಜಂಟಿಯಾಗಿ ಭಾಷಣ ಮಾಡಲಿರುವ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಈ ಎರಡೂ ಕಾರ್ಯಕ್ರಮಗಳಿಗಾಗಿ ಹತ್ತು ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಹಿತಕರ ಘಟನೆ ತಡೆಯಲು 33 ಡಿಸಿಪಿಗಳು, 75ಎಸಿಪಿಗಳು, 300 ಸಿಪಿಐಗಳು, 1000 ಪಿಎಸ್ ಐಗಳು ಮತ್ತು ಸುಮಾರು 12 ಸಾವಿರ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಆರ್ ಪಿಎಫ್ ನ ಮೂರು ಕಂಪನಿಗಳು ಮತ್ತು 15 ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ಪಡೆ ಕಾರ್ಯನಿರ್ವಹಿಸುತ್ತಿದೆ.