ಬೆಂಗಳೂರು: “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ ಗ್ಯಾರಂಟಿಗಳ ಬಗ್ಗೆಯೇ ಗೊತ್ತಿಲ್ಲ. ನಮ್ಮ ಗ್ಯಾರಂಟಿ ಕುರಿತು ಮಾತಾಡುತ್ತಾರೆ. ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದು ಯಾರು- ನಾವಾ, ನೀವಾ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಜತೆಗೆ, ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಕಾರ್ಡ್ ಅನುಷ್ಠಾನಗೊಳಿಸುವುದು ನಮ್ಮ ಬದ್ಧತೆಯಾಗಿದೆ. ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ನಮ್ಮ ಗ್ಯಾರಂಟಿಗಳಿಗೆ ಅನುಮೋದನೆ ನೀಡಲಾಗುವುದು. ಜೂನ್‌ನಿಂದಲೇ ಅನುಷ್ಠಾನಗೊಳಿಸಲಾಗುವುದು. ಇಲ್ಲದಿದ್ದರೆ ನಾವು ಅನಂತರದಲ್ಲಿ ಮತ ಕೇಳುವುದೇ ಇಲ್ಲ. ಇದು ಕಾಂಗ್ರೆಸ್‌ನ ಪ್ರತಿಜ್ಞೆ ಎಂದು ಭರವಸೆ ನೀಡಿದರು.
ಶಾ ವಿರುದ್ಧ ದೂರು
ಮತದಾರರಿಗೆ ಬೆದರಿಕೆ ಹಾಕಿದ ಆರೋಪದಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ದೂರು ದಾಖಲಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮು ಗಲಭೆಗಳಾಗುತ್ತವೆ. ಹಾಗಾಗಿ ಯಾರೂ ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದು ಚುನಾವಣ ಪ್ರಚಾರದ ವೇಳೆ ಅಮಿತ್ ಶಾ ಹೇಳಿದ್ದಾರೆ. ಈ ಮೂಲಕ ಕೇಂದ್ರ ಸಚಿವರು ಮತದಾರರನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಐಪಿಸಿ ಸೆಕ್ಷನ್ 153, 153ಎ, 171ಜಿ, 505, 120ಬಿ, 123 ಅಡಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುಜೇìವಾಲ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೂರು ದಾಖಲಿಸಿದ್ದಾರೆ.
ಗುರುವಾರ ಬೆಳಗ್ಗೆ ಠಾಣೆಗೆ ತೆರಳಿ ದೂರು ದಾಖಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಇದೊಂದು ದೊಡ್ಡ ಪಿತೂರಿಯಾಗಿದ್ದು, ಚುನಾವಣ ಆಯೋಗ ರಾಜ್ಯ ಚುನಾವಣಾ ಪ್ರಕ್ರಿಯೆಯಲ್ಲಿ ಅಮಿತ್ ಶಾ ಭಾಗವಹಿಸದಂತೆ ನಿಷೇಧ ಹೇರಬೇಕು. ಈ ವಿಚಾರವಾಗಿ ಎಐಸಿಸಿ ಮೂಲಕ ಕೇಂದ್ರ ಚುನಾವಣ ಆಯೋಗಕ್ಕೂ ಮಾಹಿತಿ ನೀಡಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಣ್ಣ ಪೋಟೋ ಹಾಕಿದ್ದರೆ ಬಂಧಿಸಲಾಗುತ್ತಿತ್ತು. ನಾವು ಪೇ ಸಿಎಂ ಪೋಸ್ಟರ್ ಅಂಟಿಸಲು ಮುಂದಾದರೆ, ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದರು. ಆದರೆ ದೇಶದ ಗೃಹ ಸಚಿವರು ರಾಜ್ಯದ ಕಾಂಗ್ರೆಸ್ ಮತದಾರರಿಗೆ ಬೆದರಿಕೆ ಹಾಕಿದರೆ ಯಾಕೆ ಪ್ರಕರಣ ದಾಖಲಿಸಬಾರದು ಎಂದು ಪ್ರಶ್ನಿಸಿದರು.