ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಿಕಟವರ್ತಿಯಾಗಿರುವ ಸ್ಯಾಮ್ ಪಿತ್ರೋಡ ಅವರು ಪಾಕ್ ಪರ ನಿರ್ಲಜ್ಜ ಹೇಳಿಕೆಗಳನ್ನು ನೀಡುವ, ಮೂಲಕ ಕಾಂಗ್ರೆಸ್ ಪರವಾಗಿ, ಪಾಕಿಸ್ಥಾನ ರಾಷ್ಟ್ರೀಯ ದಿನಾಚರಣೆಗೆ ಚಾಲನೆ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕಿಸಿದ್ದಾರೆ.
“ಭಾರತೀಯ ಸಶಸ್ತ್ರ ಪಡೆಯನ್ನು ಕೀಳಾಗಿ ಕಾಣುವ ಮೂಲಕ ಕಾಂಗ್ರೆಸ್ ಪಕ್ಷದ ಅತ್ಯಂತ ವಿಶ್ವಸನೀಯ ಸಲಹೆಗಾರ ಮತ್ತು ಮಾರ್ಗದರ್ಶಕ (ಸ್ಯಾಮ್ ಪಿತ್ರೋಡ) ಇಂದು ಪಾಕ್ ರಾಷ್ಟ್ರೀಯ ದಿನಾಚರಣೆಗೆ ಚಾಲನೆ ನೀಡಿದ್ದಾರೆ, ಶೇಮ್ ‘ ಎಂದು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.
“ಪುಲ್ವಾಮಾ ರೀತಿಯ ಉಗ್ರ ದಾಳಿಗಳು ಎಲ್ಲ ಕಾಲದಲ್ಲೂ ನಡೆಯುತ್ತವೆ. ಅದಕ್ಕಾಗಿ ಪಾಕಿಸ್ಥಾನವನ್ನು ದೂರುವುದು ಸರಿಯಲ್ಲ. ಹಾಗೆಯೇ ಪಾಕಿಸ್ಥಾನದ ಒಳನುಗ್ಗಿ ಅಲ್ಲಿನ ಉಗ್ರ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಬಾಂಬ್ ದಾಳಿ ನಡೆಸಿರುವುದು ಕೂಡ ಸರಿಯಲ್ಲ’ ಎಂದು ಸ್ಯಾಮ್ ಪಿತ್ರೋಡ ಇಂದಷ್ಟೇ ತಮ್ಮ ಅಭಿಪ್ರಾಯ, ನಿಲುವು ಪ್ರಕಟಿಸಿದ್ದರು. ಮಾತ್ರವಲ್ಲದೆ ಐಎಎಫ್ ವಾಯುದಾಳಿಯಲ್ಲಿ ಸತ್ತಿರುವ ಉಗ್ರರ ಸಂಖ್ಯೆ ಎಷ್ಟು ? ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದರು.
“ವಿಪಕ್ಷಗಳು ನಮ್ಮ ಸಶಸ್ತ್ರ ಪಡೆಗಳನ್ನು ಪದೇ ಪದೇ ಅವಮಾನಿಸುತ್ತಿವೆ; ದೇಶ ಬಾಂಧವರಲ್ಲಿ ನನ್ನ ಕೋರಿಕೆ ಏನೆಂದರೆ ಈ ರೀತಿಯ ನಾಚಿಕೆಗೇಡಿನ ಹೇಳಿಕೆಯನ್ನು ನೀಡುತ್ತಿರುವ ವಿಪಕ್ಷ ನಾಯಕರನ್ನು ನೀವು ಪ್ರಶ್ನಿಸಬೇಕು; ನೀವು ಅವರಿಗೆ ಹೇಳಬೇಕು : 130 ಕೋಟಿ ಭಾರತೀಯರು ಎಂದೂ ನಿಮ್ಮನ್ನು ನಿಮ್ಮ ಈ ರೀತಿಯ ನಾಚಿಕೆಗೇಡಿನ ಹೇಳಿಕೆಗೆ ಕ್ಷಮಿಸುವುದಿಲ್ಲ. ಇಡಿಯ ದೇಶ ನಮ್ಮ ಭದ್ರತಾ ಪಡೆಗಳ ಬೆಂಬಲಕ್ಕೆ ದೃಢವಾಗಿ ನಿಂತಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.