ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು, ಕೇಂದ್ರ ಸಚಿವರು ತ್ರಿವರ್ಣ ಧ್ವಜವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಡಿಸ್‌ಪ್ಲೇ ಪಿಕ್ಟರ್(ಡಿಪಿ) ಆಗಿ ಬದಲಿಸಿದ್ದಾರೆ. ದೇಶವಾಸಿಗಳೆಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದ್ದಾರೆ.
ಆ.2ರಿಂದ 15ರವರೆಗೆ ಡೀಪಿಗಳಲ್ಲಿ ತಿರಂಗಾ ಚಿತ್ರವನ್ನು ಹಾಕುವಂತೆ ಇತ್ತೀಚೆಗೆ ಮೋದಿ ಸಲಹೆ ನೀಡಿದ್ದರು. ಅದರಂತೆ ಮಂಗಳವಾರ ಪ್ರಧಾನಿ ಮೋದಿ, ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಕರ್ನಾಟಕ ಸಿಎಂ ಬೊಮ್ಮಾಯಿ, ಉ.ಪ್ರ. ಸಿಎಂ ಯೋಗಿ ಸೇರಿದಂತೆ ಬಹುತೇಕ ಮಂದಿ ಡೀಪಿ ಬದಲಿಸಿಕೊಂಡಿದ್ದಾರೆ.
ಇನ್ನು, ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿರುವ ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ ಅವರ 146ನೇ ಜನ್ಮದಿನ ಹಿನ್ನೆಲೆ ದೆಹಲಿಯಲ್ಲಿ ಮಂಗಳವಾರ ಸಂಸ್ಕೃತಿ ಸಚಿವಾಲಯ “ತಿರಂಗಾ ಉತ್ಸವ’ ಏರ್ಪಡಿಸಿತ್ತು. ಅಲ್ಲಿ ಹರ್ ಘರ್ ತಿರಂಗಾ ಗೀತೆ ಮತ್ತು ವಿಡಿಯೋವನ್ನು ಅನಾವರಣಗೊಳಿಸಲಾಗಿದೆ. ಈ ಮಧ್ಯೆ, ಪಿಂಗಳಿ ವೆಂಕಯ್ಯ ಅವರು ಆಂಧ್ರ ಮೂಲದವರಾದ ಕಾರಣ ಆಂಧ್ರಪ್ರದೇಶ ಸಿಎಂ ಜಗನ್‌ರೆಡ್ಡಿ ಅವರು ತಮ್ಮ ಕ್ಯಾಂಪ್ ಆಫೀಸ್‌ನಲ್ಲಿ ಮಂಗಳವಾರ ಧ್ವಜಾರೋಹಣ ಮಾಡಿದ್ದಾರೆ.
ವೆಂಕಯ್ಯ ಅವರ ಜೀವನಗಾಥೆ ವಿವರಿಸುವ ಫೋಟೋ ಪ್ರದರ್ಶನವನ್ನೂ ಉದ್ಘಾಟಿಸಿದ್ದಾರೆ. ಭಾರತೀಯ ಅಂಚೆಯು ವೆಂಕಯ್ಯ ಅವರ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿದೆ.
ಇದೇ ವೇಳೆ, ಸೆ.25ರಂದು ಕೇಂದ್ರ ಮತ್ತು ರಾಜ. ಸರ್ಕಾರಿ ಉದ್ಯೋಗಿಗಳಿಗೆ “ರನ್ ಫಾರ್ ಆಜಾದಿ’ ಎಂಬ ಹಾಫ್ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಮಾಹಿತಿ ನೀಡಿದೆ.