ಲಕ್ನೋ: ಚುನಾವಣೆಯಲ್ಲಿ ಮತಗಳನ್ನು ಸೆಳೆಯಲು ಉಚಿತವಾಗಿ ನೀಡುವ ಘೋಷಣೆಯನ್ನು ರೇವ್ಡಿ ಸಂಸ್ಕೃತಿ ಎಂದು ಕರೆದಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕಿಸಿದ್ದು, ಯುವಕರು ಇಂತಹ ಆಮಿಷಗಳಿಗೆ ಬಲಿಯಾಗಬಾರದು ಎಂದು ಹೇಳಿದರು.
ಇದನ್ನೂ ಓದಿ:ಯೋಧರ ಕಾಲಿಗೆ ನಮಸ್ಕರಿಸಿದ ಪುಟ್ಟ ಕಂದಮ್ಮ: ವಿಡಿಯೋ ವೈರಲ್
ಇತ್ತೀಚೆಗೆ ಗುಜರಾತ್ ಮತ್ತು ಹಿಮಾಚಲ್ ಪ್ರದೇಶದಲ್ಲಿ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ ಜನರಿಗೆ ಉಚಿತ ವಿದ್ಯುತ್ ಕೊಡುವುದಾಗಿ ಘೋಷಿಸಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಆಮ್ ಆದ್ಮಿ ಪಕ್ಷವನ್ನು ಗುರಿಯಾಗಿರಿಸಿಕೊಂಡು ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ರೇವ್ಡಿ (ಉತ್ತರಪ್ರದೇಶದ ಸಿಹಿ ತಿನಿಸು) ಹಂಚುವ ರೀತಿ ಮತಗಳನ್ನು ಸೆಳೆಯಲು ಇತ್ತೀಚೆಗೆ ಉಚಿತ ಕೊಡುಗೆಗಳ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಜನರು ಮತ್ತು ಯುವಕರು ಎಚ್ಚರಿಕೆಯಿಂದ ಇರಬೇಕು ಎಂದು ಉತ್ತರಪ್ರದೇಶದ ಬುಂದೇಲ್ ಖಂಡ್ ನಲ್ಲಿ 296 ಕಿಲೋ ಮೀಟರ್ ಉದ್ದದ ಎಕ್ಸ್ ಪ್ರೆಸ್ ವೇಯನ್ನು ಉದ್ಘಾಟಿಸಿ ಮಾತನಾಡಿದ ವೇಳೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಯಾರು ರೇವ್ಡಿ ಕೊಡುವುದಾಗಿ ಹೇಳುತ್ತಾರೋ ಅವರಿಂದ ಯಾವತ್ತೂ ಎಕ್ಸ್ ಪ್ರೆಸ್ ವೇ ಆಗಲಿ, ವಿಮಾನ ನಿಲ್ದಾಣಗಳನ್ನಾಗಲಿ ನಿರ್ಮಿಸಲು ಸಾಧ್ಯವಿಲ್ಲ. ಡಬ್ಬಲ್ ಎಂಜಿನ್ ಸರ್ಕಾರ ಮಾತ್ರ ರಾಜ್ಯದ ಅಭಿವೃದ್ಧಿಗೆ ಯತ್ನಿಸುತ್ತದೆ ವಿನಃ ರೇವ್ಡಿ ಸಂಸ್ಕೃತಿಯಿಂದ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ಉಚಿತ ಕೊಡುಗೆಗಳ (ರೇವ್ಡಿ ಸಂಸ್ಕೃತಿ) ಸಂಸ್ಕೃತಿ ದೇಶಕ್ಕೆ ತುಂಬಾ ಅಪಾಯಕಾರಿ. ಚುನಾವಣೆಯಲ್ಲಿ ಉಚಿತ ಕೊಡುಗೆಗಳ ಘೋಷಣೆ ಬಗ್ಗೆ ಮತದಾರರು ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಗುಜರಾತ್ ಮತ್ತು ಹಿಮಾಚಲ್ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿಯೂ ಸ್ಪರ್ಧಿಸುವುದಾಗಿ ಆಮ್ ಆದ್ಮಿ ಪಕ್ಷ ಘೋಷಿಸಿತ್ತು. ಒಂದು ವೇಳೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಎರಡೂ ರಾಜ್ಯಗಳಲ್ಲಿ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತ್ತು.