ಪೆರ್ಲ: ಭಾರತೀಯ ಜನತಾ ಪಕ್ಷದ ಹಿರಿಯ ಕಾರ್ಯಕರ್ತ ಪೆರ್ಲದ ಟಿ ಆರ್ ಕೆ ಭಟ್ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದರು.
ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಟಿ ಆರ್ ಕೆ ಭಟ್ ಅವರಿಗೆ ಕರೆ ಮಾಡಿದ ಮೋದಿಯವರು ಸುಮಾರು ಆರು ನಿಮಿಷಗಳ ಕಾಲ ಮಾತನಾಡಿದರು. ಭಟ್ ಅವರ ಆರೋಗ್ಯ ವಿಚಾರಿಸಿದ ಮೋದಿಯವರು, ಭಟ್ ಅವರು ನಡೆಸಿಕೊಂಡು ಬಂದ ಸಮಾಜ ಸೇವೆಯ ಬಗ್ಗೆಯೂ ಮಾತನಾಡಿದರು.
ಪ್ರಧಾನಿಯವರ ಕರೆಯಿಂದ ಸಂತಸಗೊಂಡ ಟಿ ಆರ್ ಕೆ ಭಟ್ ಅವರು ಪ್ರಧಾನಿಗಳ ಕೆಲಸದ ಬಗ್ಗೆ ಪ್ರಶಂಸೆ ಮಾಡಿದರು. ನೀವು ಒಳ್ಳೆಯ ಕೆಲಸ ಮಾಡುತ್ತಾ ಇದ್ದೀರಿ ತನಗೆ ಅದನ್ನು ನೋಡುವ ಕೇಳುವ ಭಾಗ್ಯ ಸಿಕ್ಕಿತು. ಇನ್ನೂ ಮುಂದೆಯೂ ತಮಗೆ ದೇಶ ಸೇವೆ ಮಾಡುವ ಆಯುಷ್ಯ ಆರೋಗ್ಯ ದೇವರು ನೀಡಲಿಯೆಂದು ಹಾರೈಸಿದರು. ಇದಕ್ಕೆ ಪ್ರತಿಯಾಗಿ ನಿಮ್ಮಂತಹ ಹಿರಿಯರ ಆಶೀರ್ವಾದದಿಂದ ಇದು ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದರು.
ಯಾರು ಟಿ ಆರ್ ಕೆ ಭಟ್ ?
ತಡೆಗಲ್ಲು ರಾಮಕೃಷ್ಣ ಭಟ್ ಅಥವಾ ಟಿ ಆರ್ ಕೆ ಭಟ್ ಅವರಿಗೆ ಈಗ 90 ವರ್ಷ. ಸ್ವಾತಂತ್ರ್ಯ ಹೋರಾಟಲ್ಲಿ ಕಾಣಿಸಿಕೊಂಡಿದ್ದ ಇವರು ಮುಂದೆ ಜನಸಂಘದಲ್ಲಿ ಸಕ್ರಿಯರಾಗಿದ್ದರು. ಕಾಸರಗೋಡಿನ ಬದಿಯಡ್ಕದಲ್ಲಿ ಮೊದಲ ಬಾರಿಗೆ ಸಂಘದ ಶಾಖೆ ಆರಂಭಿಸಿದ್ದರು ಟಿ ಆರ್ ಕೆ ಭಟ್. ಗಾಂಧಿ ಹತ್ಯೆಯ ಸಮಯದಲ್ಲಿ ಸುಮಾರು ಮೂರು ತಿಂಗಳ ಕಾಲ ಸೆರೆಮನೆ ವಾಸ ಅನುಭವಿಸಿದ್ದರು. ಸದ್ಯ ಕಳೆದ ಹತ್ತು ವರ್ಷಗಳಿಂದ ವಿಶ್ರಾಂತ ಜೀವನ ನಡೆಸುತ್ತಿರುವ ಭಟ್ ಅವರು ಕಾಸರಗೋಡಿನ ಪೆರ್ಲದಲ್ಲಿ ನೆಲೆಸಿದ್ದಾರೆ.