Advertisement

ಪ್ರಧಾನಿ ಮೋದಿ ಜನ್ಮದಿನ: 2ರವರೆಗೆ ಸೇವಾ ಪಾಕ್ಷಿ

02:32 PM Sep 16, 2022 | Team Udayavani |

ಕಲಬುರಗಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸೆಪ್ಟೆಂಬರ್‌ 17ರ ಜನ್ಮದಿನದ ಹಿನ್ನೆಲೆಯಲ್ಲಿ ಸೆ.17ರಿಂದ ಅಕ್ಟೋಬರ್‌ 2ರ ವರೆಗೆ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಡಾ|ಉಮೇಶ ಜಾಧವ ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ಸೆ.17ರಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ದೇಶಾದ್ಯಂತ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಜತೆಗೆ, ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಅಲ್ಲದೇ ಇನ್ನೂ ಹಲವಾರು ಸಾಮಾಜಿಕ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ದೇಶದ “ಆಜಾದಿ ಕಾ ಅಮೃತ ಮಹೋತ್ಸವ’ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 75ಕೆರೆಗಳ ಅಭಿವೃದ್ಧಿ ಜತೆಗೆ ಅವುಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಪೂರಕವಾಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನದಿ, ಕೆರೆ, ಬಾವಿಗಳ ಸ್ವತ್ಛತಾ ಕಾರ್ಯ ಕೈಗೊಂಡು, ಸಸಿಗಳನ್ನು ನೆಡಲಿದ್ದಾರೆ ಎಂದು ತಿಳಿಸಿದರು.

2025ರ ಹೊತ್ತಿಗೆ ಭಾರತವನ್ನು ಕ್ಷಯ ಮುಕ್ತ ದೇಶವಾಗಿ ಸದೃಢಗೊಳಿಸುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳು, ಪದಾಧಿಕಾರಿಗಳು ಸೇವಾ ಪಾಕ್ಷಿಕದ ಅವಧಿಯಲ್ಲಿ ಐವರು ಕ್ಷಯ ರೋಗಿಗಳಿಗೆ ಮಾರ್ಗದರ್ಶನ ಹಾಗೂ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಿದ್ದಾರೆ ಎಂದು ವಿವರಿಸಿದರು.

ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಪ್ರಧಾನಿ ಮೋದಿ ಅವರ ಜೀವನ ಪರಿಚಯ ಮಾಡಿಕೊಡುವ ಪ್ರದರ್ಶನ ಹಮ್ಮಿಕೊಳ್ಳಲಾಗುವುದು. ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ ಕೈಗೊಂಡ ಜನಕಲ್ಯಾಣ ಯೋಜನೆಗಳ ಕುರಿತಾದ ಪುಸ್ತಕ ಪ್ರದರ್ಶನ ನಡೆಯಲಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವುದು, ಎಲ್ಲ ಮಂಡಲಗಳಲ್ಲಿ ಎರಡು ದಿನಗಳ ಕಾಲ ಸ್ವತ್ಛತಾ ಅಭಿಯಾನ, ಮಳೆ ನೀರಿನ ಸಂಗ್ರಹದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸೆ.25ರಂದು ಪಂಡಿತ ದೀನ್‌ ದಯಾಳ್‌ ಉಪಾಧ್ಯಾಯ ಜಯಂತಿ ಆಚರಿಸಲಾಗುವುದು. ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ಸ್ವದೇಶಿ, ಆತ್ಮನಿರ್ಭರತೆ, ಸರಳತೆ ಮತ್ತು ಶುಚಿತ್ವದ ಕುರಿತು ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Advertisement

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮದ ರೂಪುರೇಷೆ ವಿವರಿಸಿದರು. ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಬಿಜೆಪಿ ಮಾಧ್ಯಮ ಸಂಚಾಲಕ ಚಂದ್ರಶೇಖರ ರೆಡ್ಡಿ ಮುಂತಾದವರು ಇದ್ದರು.

ಕೇಂದ್ರ ಸರ್ಕಾರ ಕಲಬುರಗಿಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆಗೆ ಒಲವು ತೋರಿದೆ. ಅಲ್ಲದೇ ಕಲಬುರಗಿಯಿಂದ ಮಹಾರಾಷ್ಟ್ರದ ಕೊಲ್ಹಾಪುರ ವರೆಗೂ ಹೊಸ ರೈಲು ಓಡಿಸಲಾಗುತ್ತಿದೆ. ಅದೇ ರೀತಿ ಎರಡನೇ ವರ್ತುಲ ರಸ್ತೆಗೆ ಒಪ್ಪಿಗೆ ಸೂಚಿಸಿರುವುದು ಸೇರಿದಂತೆ ಹಲವಾರು ಕಾರ್ಯಗಳನ್ನು ಕಲಬುರಗಿಗೆ ತರಲಾಗಿದೆ. ಇನ್ಮುಂದೆ ಕಾರ್ಯಗಳ ವೇಗ ಹೆಚ್ಚಳವಾಗಲಿದೆ. ಡಾ|ಉಮೇಶ ಜಾಧವ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next