ಅಹಮದಾಬಾದ್: ಬಾರ್ಡರ್- ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯಕ್ಕೆ ಅಹಮದಾಬಾದ್ ನಲ್ಲಿ ಸಿದ್ದತೆ ನಡೆಯುತ್ತಿದೆ. ವಿಶೇಷವೆಂದರೆ ಉಭಯ ದೇಶಗಳ ಪ್ರಧಾನಿಗಳು ಪಂದ್ಯ ವೀಕ್ಷಿಸಲಿದ್ದಾರೆ.
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮಾರ್ಚ್ 8 ರಿಂದ 11 ರವರೆಗೆ ಭಾರತಕ್ಕೆ ನಾಲ್ಕು ದಿನಗಳ ಭೇಟಿ ನೀಡಲಿದ್ದಾರೆ. ಇದು 2017 ರ ನಂತರ ಭಾರತಕ್ಕೆ ಆಸ್ಟ್ರೇಲಿಯಾದ ಪ್ರಧಾನಿಯ ಮೊದಲ ಭೇಟಿಯಾಗಿದೆ.
ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸೀಸ್ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಅಹಮದಾಬಾದ್ ನಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸಲಿದ್ದಾರೆ.
ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಆಂಥೋನಿ ಅವರ ಅಹಮದಾಬಾದ್, ಮುಂಬೈ ಮತ್ತು ನವದೆಹಲಿ ಭೇಟಿಯು ಭಾರತದೊಂದಿಗಿನ ದೇಶದ ವ್ಯೂಹಾತ್ಮಕ, ಆರ್ಥಿಕ ಮತ್ತು ಜನರ-ಜನರ ನಡುವಿನ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸುತ್ತದೆ ಎಂದಿದೆ.
ಆಂಥೋನಿ ಅಲ್ಬನೀಸ್ ಮಾರ್ಚ್ 8 ರಂದು ಅಹಮದಾಬಾದ್ ಗೆ ಆಗಮಿಸಲಿದ್ದು, ಮಾರ್ಚ್ 9 ರಂದು ಮುಂಬೈಗೆ ಭೇಟಿ ನೀಡಲಿದ್ದು, ನಂತರ ದೆಹಲಿಗೆ ಆಗಮಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ನಾಲ್ಕನೇ ಟೆಸ್ಟ್ ಪಂದ್ಯವು ಮಾರ್ಚ್ 9ರಂದು ಆರಂಭವಾಗಲಿದೆ. ಸರಣಿಯಲ್ಲಿ ಭಾರತ ತಂಡವು 2-1 ಅಂತರದಿಂದ ಮುನ್ನಡೆ ಸಾಧಿಸಿದೆ.