ಹೊಸದಿಲ್ಲಿ: ನಾವು ಹಬ್ಬಗಳನ್ನು ಆಚರಿಸುವಾಗ ಸೈನಿಕರು ನಮ್ಮ ಗಡಿಗಳನ್ನು ರಕ್ಷಿಸುತ್ತಿದ್ದಾರೆಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, ಹಬ್ಬದ ಸಂದರ್ಭದಲ್ಲಿ ಮನೆಗಳಲ್ಲಿ ಸೈನಿಕರಿಗಾಗಿ ದೀಪ ಬೆಳಗಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಕ್ಕಟ್ಟು, ಕಷ್ಟದ ಸಮಯದಲ್ಲಿ ತಾಳ್ಮೆಯ ಗೆಲುವೇ ದಸರಾ ಹಬ್ಬವಾಗಿದೆ. ಇಂದು ಕೋವಿಡ್-19 ಮಧ್ಯೆ ಬಹಳ ಸಂಯಮ, ವಿನಯದಿಂದ ಸರಳವಾಗಿ ದಸರಾ ಹಬ್ಬವನ್ನು ಆಚರಿಸುತ್ತಿದ್ದೀರಿ, ಈ ಕೋವಿಡ್ ಯುದ್ಧದಲ್ಲಿ ನಾವು ಗೆಲ್ಲುವುದು ನಿಶ್ಚಿತ ಎಂದು ಹೇಳಿದರು.
ದೇಶದ ಜನತೆಗೆ ಮತ್ತೆ ‘’ವೋಕಲ್ ಫಾರ್ ಲೋಕಲ್’’ ಕರೆ ನೀಡಿದ ಪ್ರಧಾನಿ ಮೋದಿ, ಹಬ್ಬಗಳಿಗಾಗಿ ಶಾಪಿಂಗ್ ಗೆ ಹೋದ ಸಮಯದಲ್ಲಿ ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡಿ. ಮಾರುಕಟ್ಟೆಯಿಂದ ವಸ್ತುಗಳನ್ನು ಖರೀದಿಸುವಾಗ ಸ್ಥಳೀಯ ವಸ್ತುಗಳಿಗೆ ಆದ್ಯತೆ ನೀಡಿ ಎಂದರು.
ಇದನ್ನೂ ಓದಿ:ಭೂಮಿ ಕಬಳಿಸಲು ಯತ್ನಿಸಿದ ಚೀನಾಗೆ ಭಾರತ ತಕ್ಕ ಉತ್ತರ ನೀಡಿದೆ: ಮೋಹನ್ ಭಾಗ್ವತ್
ಇಷ್ಟು ವರ್ಷಗಳಲ್ಲಿ ದುರ್ಗಾ ಪೂಜೆಯ ದಿನ ಪೆಂಡಾಲ್ ಗಳಲ್ಲಿ ಸಾವಿರಾರು ಜನ ಒಟ್ಟು ಸೇರುತ್ತಿದ್ದರು. ದುರ್ಗಾ ಪೂಜೆ, ದಸರಾ ಎಂದರೆ ಜನರಿಗೆ, ಮಹಿಳೆಯರಿಗೆ ಎಲ್ಲಿಲ್ಲದ ಸಡಗರ, ಸಂಭ್ರಮಗಳಿಂದ ಜತೆ ಸೇರುತ್ತಿದ್ದರು. ಆದರೆ ಈ ವರ್ಷ ಒಟ್ಟು ಸೇರಿ ದುರ್ಗಾ ಪೂಜೆ ಮಾಡುವುದಕ್ಕೆ ಅವಕಾಶವಿಲ್ಲ. ಮುಂದೆ ಸಾಕಷ್ಟು ಹಬ್ಬಗಳು ಬರುತ್ತವೆ. ಈ ಬಾರಿ ಕಟ್ಟುನಿಟ್ಟಿನಿಂದ ಜಾಗ್ರತೆಯಿಂದ ಈ ಕೋವಿಡ್ ಸಮಸ್ಯೆ ವಿರುದ್ಧ ಹೋರಾಡಬೇಕಿದೆ, ಅದರಲ್ಲಿ ಗೆದ್ದು ಮುಂದೆ ಹಬ್ಬ ಆಚರಿಸೋಣ ಎಂದರು.
ಕಠಿಣ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೆವು. ಭದ್ರತಾ ಸಿಬ್ಬಂದಿ, ಪೊಲೀಸ್, ಪೌರ ಕಾರ್ಮಿಕರ ಜೊತೆ ನಿಂತಿದ್ದೇವೆ. ಹಬ್ಬಗಳ ಸಮಯದಲ್ಲಿಯೂ ನಾವು ಅವರ ಜೊತೆ ನಿಲ್ಲೋಣ, ಅವರನ್ನು ನಮ್ಮ ಪರಿವಾರದವರು ಎಂದು ಭಾವಿಸೋಣ ಎಂದು ಪ್ರಧಾನಿ ಮೋದಿ ದೇಶದ ಜನತೆಗೆ ಕರೆ ನೀಡಿದರು.