Advertisement

ಸ್ವಚ್ಛತಾ ಶಿಬಿರಕ್ಕೆ ಕ್ರೆಡಿಟ್‌ ಪಾಯಿಂಟ್‌

09:45 AM Apr 30, 2018 | Team Udayavani |

ಹೊಸದಿಲ್ಲಿ: ಈ ಬಾರಿಯ ಮನ್‌ ಕಿ ಬಾತ್‌ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಮುಂದೆ ಹೊಸ ಐಡಿಯಾವನ್ನು ಇರಿಸಿದ್ದಾರೆ. ಬೇಸಗೆ ರಜೆಯ ಅವಧಿಯಲ್ಲಿ ‘ಸ್ವಚ್ಛ ಭಾರತಕ್ಕಾಗಿ ಬೇಸಗೆ ಶಿಬಿರ’ದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದು, ಭಾಗವಹಿಸಿದ ವಿದ್ಯಾರ್ಥಿಗಳಿಗೆ ಯುಜಿಸಿ ಮೂಲಕ ಕ್ರೆಡಿಟ್‌ ಪಾಯಿಂಟ್‌ ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ.

Advertisement

ಈ ಬಾರಿಯ ಬೇಸಗೆ ರಜೆಯಲ್ಲಿ ವಿದ್ಯಾರ್ಥಿಗಳು ಸ್ವಚ್ಛ ಭಾರತ ಶಿಬಿರದಲ್ಲಿ ಭಾಗವಹಿಸಬೇಕು ಎಂದು ಪ್ರಧಾನಿ ಸಲಹೆ ಮಾಡಿದ್ದಾರೆ. ಕೇಂದ್ರ ಸರಕಾರದ ಮೂರು ಸಚಿವಾಲಯಗಳು ಸ್ವಚ್ಛ ಭಾರತ ಇಂಟರ್ನ್ ಶಿಪ್‌ ಆರಂಭಿಸಿದ್ದು, ಸಮಾಜಕ್ಕಾಗಿ ಕೆಲಸ ಮಾಡಿ ಧನಾತ್ಮಕ ಬದಲಾವಣೆ ತರಬೇಕು ಎಂದು ಭಾವಿಸುವವರಿಗೆ ಇದು ಸಹಕಾರಿ ಎಂದು ಪ್ರಧಾನಿ ಹೇಳಿದ್ದಾರೆ.

ಇಂಥ ಶಿಬಿರದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ರಾಷ್ಟ್ರ ಮಟ್ಟದಲ್ಲಿ ಗೌರವಿಸಲಾಗುತ್ತದೆ. ಕಾಲೇಜು ಶಿಕ್ಷಣ ಪಡೆಯುವವರಿಗೆ ಯುಜಿಸಿ ಮೂಲಕ 2 ಕ್ರೆಡಿಟ್‌ ಪಾಯಿಂಟ್‌ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಮೋದಿ ಹೇಳಿದ್ದಾರೆ. ಈ ಯೋಜನೆಯಲ್ಲಿ ವಿದ್ಯಾರ್ಥಿ ಸಮುದಾಯ ಭಾಗವಹಿಸಿದರೆ ತಮ್ಮ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಸ್ವಚ್ಛ ಭಾರತ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಮಹಾತ್ಮಾ ಗಾಂಧಿಯವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಇದೊಂದು ಅರ್ಥಪೂರ್ಣ ಸಾಧನೆ ಆಗಲಿದೆ ಎಂದಿದ್ದಾರೆ ಪ್ರಧಾನಿ.

ಮೂವತ್ತು ನಿಮಿಷಗಳ ಭಾಷಣದಲ್ಲಿ ರಮ್ಜಾನ್‌, ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ಪ್ರವಾದಿ ಮೊಹಮ್ಮದ್‌, ಗೌತಮ ಬುದ್ಧರನ್ನು ನೆನಪಿಸಿಕೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಇದರ ಜತೆಗೆ ನೀರಿನ ಸಂರಕ್ಷಣೆ ಸಹಿತ ಹಲವು ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next