ಬೆಂಗಳೂರು :ಹಿಂದಿ ರಾಷ್ಟ್ರ ಭಾಷೆ ವಿಚಾರದಲ್ಲಿ ದಿಗ್ಗಜ ನಟರಾದ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ಟ್ವೀಟ್ ಸಮರಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಟಿ, ಮಾಜಿ ಕಾಂಗ್ರೆಸ್ ಸಂಸದೆ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ಒಂದನ್ನು ಮರು ಟ್ವೀಟ್ ಮಾಡಿ ಮತ್ತೆ ಟಾಂಗ್ ನೀಡಿದ್ದಾರೆ.
ಸುದೀಪ್ ಅವರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದ ರಮ್ಯಾ , ಇಲ್ಲ- ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ.ಅಜಯ್ ದೇವಗನ್ ನಿಮ್ಮ ಅಜ್ಞಾನವು ವಿಸ್ಮಯಕಾರಿಯಾಗಿದೆ. ಕೆಜಿಎಫ್, ಪುಷ್ಪ ಮತ್ತು ಆರ್‌ಆರ್‌ಆರ್‌ನಂತಹ ಚಲನಚಿತ್ರಗಳು ಹಿಂದಿ ಬೆಲ್ಟ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದು ಅದ್ಭುತವಾಗಿದೆ- ಕಲೆಗೆ ಯಾವುದೇ ಭಾಷೆಯ ತಡೆ ಇಲ್ಲ. ನಿಮ್ಮ ಚಲನಚಿತ್ರಗಳನ್ನು ನಾವು ಆನಂದಿಸಿದಂತೆ ದಯವಿಟ್ಟು ನಮ್ಮ ಚಲನಚಿತ್ರಗಳನ್ನು ಆನಂದಿಸಿ- ಹಿಂದಿ ಹೇರಿಕೆ ನಿಲ್ಲಿಸಿ ಎಂದು ತಿರುಗೇಟು ನೀಡಿದ್ದರು.
ಇದು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನಿ ಭಾಷೆಯಲ್ಲಿ ಮಾಡಿದ ಟ್ವೀಟ್ ಮರು ಟ್ವೀಟ್ ಮಾಡಿರುವ ರಮ್ಯಾ ‘ಪ್ರಧಾನಿ ಉದಾಹರಣೆ ಮುನ್ನಡೆಸುತ್ತದೆ’ ಎಂದು ಬರೆದಿದ್ದಾರೆ.
ಭಾರತ ಮತ್ತು ಜಪಾನ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ, ಎರಡೂ ದೇಶಗಳ ನಡುವಿನ ಸಂಬಂಧಗಳು ಕಾರ್ಯತಂತ್ರ, ಆರ್ಥಿಕ ಮತ್ತು ಮಾನವ ವಿನಿಮಯದಂತಹ ಎಲ್ಲಾ ಕ್ಷೇತ್ರಗಳಲ್ಲಿ ಗಾಢವಾಗುತ್ತಿರುವುದು ನಮಗೆ ತುಂಬಾ ಸಂತೋಷವಾಗಿದೆ ಎಂದು ಪ್ರಧಾನಿ ಜಪಾನ್ ಭಾಷೆಯಲ್ಲೇ ಟ್ವೀಟ್ ಮಾಡಿದ್ದರು.