Advertisement

ಅವಲಂಬನೆ ಬಿಡಿ, ಆತ್ಮನಿರ್ಭರರಾಗಿ: ಪ್ರಧಾನಿ ಮೋದಿ

09:31 PM Oct 17, 2022 | Team Udayavani |

ನವದೆಹಲಿ:“ರಸಗೊಬ್ಬರ ಹಾಗೂ ಖಾದ್ಯ ತೈಲದ ಆಮದು ವೆಚ್ಚ ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ. ಇದು ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಈ ರೀತಿ ಬೇರೆ ದೇಶಗಳ ಮೇಲೆ ಅವಲಂಬಿಸುವುದರ ಬದಲಿಗೆ, ಭಾರತವನ್ನು ಸ್ವಾವಲಂಬಿಯಾಗಿಸಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ ಸೋಮವಾರದಿಂದ ಆರಂಭವಾಗಿರುವ 2 ದಿನಗಳ “ಪಿಎಂ ಕಿಸಾನ್‌ ಸಮ್ಮಾನ್‌ ಸಮ್ಮೇಳನ 2022’ದಲ್ಲಿ ಮಾತನಾಡಿದ ಅವರು, “ರಫ್ತು ಮಾಡುವಂಥ ದೇಶಗಳಲ್ಲಿ ಏನೇ ಸಮಸ್ಯೆ ಆದರೂ, ಅದು ನೇರವಾಗಿ ಆಮದಿನ ದರದ ಮೇಲೆ ಪರಿಣಾಮ ಬೀರುತ್ತದೆ. ರಷ್ಯಾ-ಉಕ್ರೇನ್‌ ಯುದ್ಧದ ನಂತರ ಆಗಿರುವ ವೆಚ್ಚ ಹೆಚ್ಚಳವೇ ಇದಕ್ಕೆ ಸಾಕ್ಷಿ. ಇದನ್ನು ತಪ್ಪಿಸಬೇಕೆಂದರೆ ನಾವು ಆತ್ಮನಿರ್ಭರತೆಯನ್ನು ಸಾಧಿಸಬೇಕು’ ಎಂದು ಹೇಳಿದ್ದಾರೆ.

ಇದೇ ವೇಳೆ, ಅವರು “ಒಂದು ದೇಶ- ಒಂದು ರಸಗೊಬ್ಬರ’ ಯೋಜನೆಯಡಿ ಸಬ್ಸಿಡಿಸಹಿತ ಯೂರಿಯಾವನ್ನು “ಭಾರತ್‌’ ಎಂಬ ಏಕ ಬ್ರ್ಯಾಂಡ್‌ನ‌ಡಿ ಬಿಡುಗಡೆ ಮಾಡಿದ್ದಾರೆ. 600 ಕಿಸಾನ್‌ ಸಮೃದ್ಧಿ ಕೇಂದ್ರಗಳಿಗೂ ಚಾಲನೆ ನೀಡಿದ್ದಾರೆ. ಈ ಎರಡೂ ಸುಧಾರಣಾ ಕ್ರಮಗಳು ದೇಶದ ರೈತರಿಗೆ ರಸಗೊಬ್ಬರದ ಗುಣಮಟ್ಟ ಮತ್ತು ಲಭ್ಯತೆಯನ್ನು ಖಾತ್ರಿಪಡಿಸಲಿದೆ ಎಂದಿದ್ದಾರೆ.

“ರಸಗೊಬ್ಬರ ಬ್ರ್ಯಾಂಡ್‌ಗಳ ಬಗ್ಗೆ ಈವರೆಗೆ ರೈತರು ಗೊಂದಲಕ್ಕೊಳಗಾಗುತ್ತಿದ್ದರು. ಅಲ್ಲದೇ, ಅವರಿಗೆ ಉತ್ತಮ ಗುಣಮಟ್ಟದ ಮಣ್ಣಿನ ಪೋಷಕಾಂಶಗಳು ಸಿಗುತ್ತಿರಲಿಲ್ಲ. ಒಂದು ಕಡೆ, ಚಿಲ್ಲರೆ ಮಾರಾಟಗಾರರು ತಮಗೆ ಹೆಚ್ಚು ಕಮಿಷನ್‌ ಬರಲಿ ಎಂಬ ಕಾರಣಕ್ಕೆ ನಿರ್ದಿಷ್ಟ ಬ್ರ್ಯಾಂಡ್‌ನ‌ ಉತ್ಪನ್ನಗಳನ್ನೇ ರೈತರಿಗೆ ಒತ್ತಾಯಪೂರ್ವಕವಾಗಿ ನೀಡುತ್ತಿದ್ದರು. ಮತ್ತೊಂದೆಡೆ, ಕಂಪನಿಗಳು ತಮ್ಮ ತಮ್ಮ ಉತ್ಪನ್ನಗಳೇ ಹೆಚ್ಚು ಮಾರಾಟವಾಗಲಿ ಎಂದು ಜಾಹೀರಾತು ನೀಡುತ್ತಿದ್ದವು. ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ. ದೇಶಾದ್ಯಂತ ಒಂದೇ ಬ್ರ್ಯಾಂಡ್‌ ಮತ್ತು ಒಂದೇ ಗುಣಮಟ್ಟದ ಯೂರಿಯೂವನ್ನು ಮಾರಾಟ ಮಾಡಲಾಗುತ್ತದೆ. ಈ ಬ್ರ್ಯಾಂಡ್‌ನ‌ ಹೆಸರೇ ಭಾರತ್‌’ ಎಂದು ಹೇಳಿದ್ದಾರೆ.

ಇದೇ ವೇಳೆ, ವಾರಕ್ಕೊಮ್ಮೆ ಪ್ರಕಟವಾಗುವ ಅಂತಾರಾಷ್ಟ್ರೀಯ ರಸಗೊಬ್ಬರ ಇ-ನಿಯತಕಾಲಿಕೆ “ಇಂಡಿಯನ್‌ ಎಡ್ಜ್’ ಅನ್ನೂ ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅನಾವರಣಗೊಳಿಸಿದ್ದಾರೆ.

Advertisement

ಏನಿದು ಕಿಸಾನ್‌ ಸಮೃದ್ಧಿ ಕೇಂದ್ರಗಳು?
ರೈತರಿಗೆ ಬಹುಬಗೆಯ ಸೇವೆಗಳನ್ನು ಒದಗಿಸುವ ಕೇಂದ್ರಗಳಿವು. ಇದು ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಸಲಕರಣೆಗಳಂಥ ಕೃಷಿ ಸಂಬಂಧಿತ ಉತ್ಪನ್ನಗಳ ಪೂರೈಕೆ ಮಾಡುವುದು ಮಾತ್ರವಲ್ಲದೇ, ಮಣ್ಣು, ಬಿತ್ತನೆಬೀಜ ಮತ್ತು ಗೊಬ್ಬರಗಳ ಪರೀಕ್ಷಾ ಸೌಲಭ್ಯಗಳನ್ನು ಹೊಂದಿರುತ್ತವೆ. ಜತೆಗೆ, ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನೂ ಇಲ್ಲಿ ನೀಡಲಾಗುತ್ತದೆ. ದೇಶಾದ್ಯಂತ ಇರುವ 3.25 ಲಕ್ಷ ರಸಗೊಬ್ಬರ ಚಿಲ್ಲರೆ ಮಳಿಗೆಗಳನ್ನು ಪಿಎಂ-ಕಿಸಾನ್‌ ಸಮೃದ್ಧಿ ಕೇಂದ್ರಗಳನ್ನಾಗಿ ಮಾರ್ಪಾಡು ಮಾಡಲಾಗುತ್ತದೆ ಎಂದೂ ಮೋದಿ ಹೇಳಿದ್ದಾರೆ.

ಕಿಸಾನ್‌ ಸಮ್ಮಾನ್‌ನ 12ನೇ ಕಂತು ಬಿಡುಗಡೆ
ಪಿಎಂ-ಕಿಸಾನ್‌ ಯೋಜನೆಯಡಿ ರೈತರಿಗೆ ನೀಡಲಾಗುವ ಹಣಕಾಸು ನೆರವಿನ 12ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಡುಗಡೆ ಮಾಡಿದ್ದಾರೆ.

ಈ ಮೂಲಕ ದೀಪಾವಳಿಗೂ ಮುನ್ನ ಹಾಗೂ ಹಿಂಗಾರು ಬಿತ್ತನೆಯ ಸಮಯದಲ್ಲೇ ಅನ್ನದಾತರಿಗೆ ಸರ್ಕಾರ ಸಿಹಿ ನೀಡಿದಂತಾಗಿದೆ. ಒಟ್ಟಾರೆ 11 ಕೋಟಿ ಅರ್ಹ ಫ‌ಲಾನುಭವಿಗಳಿಗೆ 16 ಸಾವಿರ ಕೋಟಿ ರೂ.ಗಳ ನೆರವನ್ನು ಬಿಡುಗಡೆ ಮಾಡಲಾಗಿದೆ.

ಈ ಪೈಕಿ, ರಾಜ್ಯದ 50.36 ಲಕ್ಷ ರೈತರಿಗೆ 1,007.26 ಕೋಟಿ ರೂ. ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಲಭ್ಯವಾಗಿದೆ. ಈ ಮೂಲಕ, ಈವರೆಗೆ ಒಟ್ಟಾರೆಯಾಗಿ ರೈತರಿಗೆ ನೀಡಲಾದ ಕಿಸಾನ್‌ ಸಮ್ಮಾನ್‌ನ ಮೊತ್ತ 2.16 ಲಕ್ಷ ಕೋಟಿ ರೂ. ದಾಟಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next