ರಾಂಚಿ: ಕೇಂದ್ರದ ಮಹತ್ವಾಕಾಂಕ್ಷೆಯ “ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್” ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಜಾರ್ಖಂಡ್ ನಲ್ಲಿ ಚಾಲನೆ ನೀಡಿದ್ದಾರೆ. ಈ ಯೋಜನೆ ಇಂದಿನಿಂದ ದೇಶಾದ್ಯಂತ ಜಾರಿಗೆ ಬಂದಂತಾಗಿದೆ.
ಈ ಯೋಜನೆಯಿಂದ 18ರಿಂದ 40 ವರ್ಷ ವಯಸ್ಸಿನ ರೈತರು ತಮ್ಮನ್ನು ತೊಡಗಿಸಿಕೊಳ್ಳಬಹುದು. ವಾರ್ಷಿಕ ಕಂತುಗಳಲ್ಲಿ ತಪ್ಪದೇ ಕಟ್ಟುತ್ತಾ ಹೋದಲ್ಲಿ 60ನೇ ವರ್ಷಕ್ಕೆ ಕಾಲಿಟ್ಟ ಬಳಿಕ ಮಾಸಿಕ 3000 ರೂಪಾಯಿ ಪಿಂಚಣಿ ಪಡೆಯಲಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ದೇಶಾದ್ಯಂತ ಚಾಲನೆ ಸಿಕ್ಕಂತಾಗಿದೆ. ಈ ಯೋಜನೆಯಿಂದ ದೇಶದಲ್ಲಿನ ಸಿಎಸ್ ಸಿ(ಸಾಮಾನ್ಯ ಸೇವಾ ಕೇಂದ್ರ) ಮೂಲಕ 3.50 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ಹ ವ್ಯಾಪಾರಿಗಳು, ಸ್ವ ಉದ್ಯೋಗಿಗಳು ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರಕ್ಕೆ ತೆರಳಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಸರನ್ನು ನೋಂದಾಯಿಸಿಕೊಳ್ಳುವ ಸಂದರ್ಭದಲ್ಲಿ ಆಧಾರ್ ಕಾರ್ಡ್, ಸೇವಿಂಗ್ ಬ್ಯಾಂಕ್, ಜನ ಧನ್ ಖಾತೆ ಪಾಸ್ ಬುಕ್ ದಾಖಲೆ ಅಗತ್ಯ ಎಂದು ಹೇಳಿದೆ.
ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಗೆ ಹೆಸರನ್ನು ನೋಂದಾಯಿಸಿಕೊಳ್ಳುವವರ ವಯಸ್ಸು 18ರಿಂದ 40 ವರ್ಷದೊಳಗೆ ಇರಬೇಕು ಎಂದು ವರದಿ ವಿವರಿಸಿದೆ.