ನವದೆಹಲಿ:ಪುಲ್ವಾಮಾ ಭಯೋತ್ಪಾದನಾ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡುತ್ತದೆ. ಅಲ್ಲದೇ ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿ 40 ಯೋಧರು ಹುತಾತ್ಮರಾದ ದಿನ ಪ್ರಧಾನಿ ನರೇಂದ್ರ ಮೋದಿ ಕಾರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಸಾಕ್ಷ್ಯಚಿತ್ರದ(ಡಾಕ್ಯುಮೆಂಟರಿ) ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು ಎಂದು ರಾಹುಲ್ ಆರೋಪಿಸಿದ್ದಾರೆ.
ಅಂದು ಉಗ್ರರ ದಾಳಿ 3ಗಂಟೆ 10 ನಿಮಿಷಕ್ಕೆ ನಡೆದಿತ್ತು. ಆದರೆ ಪ್ರಧಾನಿ ಮೋದಿ ಅವರು 6.40ರವರೆಗೆ ಪ್ರಚಾರದ ಸಿನಿಮಾ ಶೂಟಿಂಗ್ ನಲ್ಲಿ ತಲ್ಲೀನರಾಗಿದ್ದರು. ಪುಲ್ವಾಮಾ ದಾಳಿಯಲ್ಲಿ 40 ಯೋಧರನ್ನು ಕಳೆದುಕೊಂಡು ಇಡೀ ದೇಶ ಶೋಕ,ಆಘಾತದಲ್ಲಿ ಮುಳುಗಿದ್ದರೆ, ಪ್ರಧಾನಿ ಮೋದಿ ಸಂಜೆವರೆಗೂ ಚಿತ್ರೀಕರಣದಲ್ಲಿಯೇ ನಿರತರಾಗಿದ್ದರು. ಇಂತಹ ಪ್ರಧಾನಿ ಜಗತ್ತಿನಲ್ಲಿ ಬೇರೆ ಎಲ್ಲಿಯಾದರು ಇದ್ದಾರೆಯೇ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲಾ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಪ್ರಧಾನಿಯ ಅಧಿಕಾರದ ದಾಹದಿಂದಾಗಿ ರಾಜಧರ್ಮವನ್ನು ಮರೆತೇ ಬಿಟ್ಟಿದ್ದಾರೆ ಎಂದು ದೂರಿರುವ ಕಾಂಗ್ರೆಸ್, ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಗುಜರಾತ್ ದಳ್ಳುರಿ ವೇಳೆ ಹೇಳಿದ್ದ ಮಾತನ್ನು ಪುನರುಚ್ಚರಿಸಿದೆ ಎಂದು ಮಾಧ್ಯಮದ ವರದಿ ವಿವರಿಸಿದೆ.
ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಿರುಗೇಟು ನೀಡಿದ್ದು, ಪ್ರಧಾನಿ ಮೋದಿ ಅವರು ಆ ಸಮಯದಲ್ಲಿ ಭಾಗವಹಿಸಿದ್ದ ಕಾರ್ಯಕ್ರಮವನ್ನು ವಿವಾದವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ದೂರಿದರು. ನೀವೇ ಮಾಡಿ, ಆದರೆ ಇದರಿಂದಾಗಿ ಈ ದೇಶದ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶಾ ಪ್ರತಿಕ್ರಿಯೆ ನೀಡಿದ್ದಾರೆ.