ರಾಂಚಿ : ‘ಭಾರತೀಯ ವಾಯು ಪಡೆ ದೇಶವನ್ನು ರಕ್ಷಿಸುತ್ತಿದೆ, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ವಾಯು ಪಡೆಯಿಂದ 30,000 ಕೋಟಿ ರೂ.ಗಳನ್ನು ಕಿತ್ತುಕೊಂಡಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಆರೋಪಿಸಿದ್ದಾರೆ.
ಇಲ್ಲಿನ ಮೋರಾಬಾದಿ ಮೈದಾನದಲ್ಲಿ ನಡೆದ ಪಕ್ಷದ ಪರಿವರ್ತನ್ ಉಲ್ ಗುಲಾನ್ ಮಹಾ ರಾಲಿ ಯಲ್ಲಿ ಮಾತನಾಡುತ್ತಿದ್ದ ರಾಹುಲ್, ‘ರಫೇಲ್ ಫೈಟರ್ ಜೆಟ್ ಡೀಲ್‌ನಲ್ಲಿ 30,000 ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು ಇಷ್ಟೊಂದು ದೊಡ್ಡ ಮೊತ್ತವನ್ನು ಅಕ್ರಮವಾಗಿ ಅನಿಲ್ ಅಂಬಾನಿಗೆ ನೀಡಲಾಗಿದೆ’ ಎಂದು ಆರೋಪಿಸಿದರು.
“ವಾಯು ಸೇನಾ ದೇಶ್ ಕೀ ರಕ್ಷಾ ಕರ್ತೀ ಹೈಂ; ಔರ್ ಹಮಾರೆ ಪಿಎಂ ಉಸೆ ಚೋರಿ ಕರ್ತೀ ಹೈಂ” ಎಂದು ರಾಹುಲ್ ಟೀಕಿಸಿದರು.
‘ಪ್ರಧಾನಿ ಮೋದಿ ಅವರು ಕೆಲವೇ ಕೆಲವು ಕೈಗಾರಿಕೋದ್ಯಮಿಗಳ 3.5 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ; ಆದರೆ ಅವರು ದೇಶದ ಬಡ ರೈತರ, ವಿದ್ಯಾರ್ಥಿಗಳ ಮತ್ತು ಅಂಗಡಿ ವ್ಯಾಪಾರಿಗಳ ಸಾಲವನ್ನು ಮನ್ನಾ ಮಾಡಿಲ್ಲ’ ಎಂದು ರಾಹುಲ್ ದೂರಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ ಕನಿಷ್ಠ ಖಚಿತ ಆದಾಯವನ್ನು ನೀಡುತ್ತದೆ ಎಂದು ರಾಹುಲ್ ಹೇಳಿದರು. ಆ ಹಣವನ್ನು ಬಡ ಜನರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಎಂದವರು ಹೇಳಿದರು.