Advertisement

ಐಎನ್‌ಎಸ್ ವಿಕ್ರಾಂತ್‌ ದೇಶಕ್ಕೆ ಸಮರ್ಪಿಸಿದ ಪ್ರಧಾನಿ ನರೇಂದ್ರ ಮೋದಿ

11:56 AM Sep 02, 2022 | Team Udayavani |

ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿ ಭಾರತದ ಮೊದಲ ಸ್ವದೇಶಿ ವಿನ್ಯಾಸ ಮತ್ತು ನಿರ್ಮಿಸಿದ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ ದೇಶಕ್ಕೆ ಸಮರ್ಪಿಸಿದರು.

Advertisement

ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ 20,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ನೌಕೆಗೆ ಪ್ರಧಾನಿ ಚಾಲನೆ ನೀಡಿದರು.ವಿಕ್ರಾಂತ್ ಕಾರ್ಯಾರಂಭದೊಂದಿಗೆ, ಭಾರತವು ಸ್ಥಳೀಯವಾಗಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿರುವ ಆಯ್ದ ರಾಷ್ಟ್ರಗಳ ಗುಂಪನ್ನು ಸೇರಿಕೊಂಡಿತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ನೌಕಾಯಾನ ಸಚಿವ ಸರ್ಬಾನಂದ ಸೋನೋವಾಲ್, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಎರ್ನಾಕುಲಂ ಸಂಸದ ಹಿಬಿ ಈಡನ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಮತ್ತು ನೌಕಾಪಡೆಯ ಉನ್ನತ ಅಧಿಕಾರಿಗಳು, ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL) ಅಧಿಕಾರಿಗಳು ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

1971 ರ ಇಂಡೋ-ಪಾಕ್ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅದರ ಹಿಂದಿನ ಹೆಸರಿನ ಐಎನ್‌ಎಸ್ ವಿಕ್ರಾಂತ್ ನೌಕಾಪಡೆಗೆ ಸೇರ್ಪಡೆಯಾದುದನ್ನು ಗುರುತಿಸಲು ಮೋದಿ ಫಲಕವನ್ನು ಅನಾವರಣಗೊಳಿಸಿದರು. ವಾಹಕವು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.

ದೇಶವು ಸ್ವಾವಲಂಬಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ

Advertisement

ಇಂದು, ಈ ಧ್ವಜ ವಂದನೆಯೊಂದಿಗೆ, ನಾನು ಈ ಹೊಸ ಧ್ವಜವನ್ನು ನೌಕಾಪಡೆಯ ಪಿತಾಮಹ ಛತ್ರಪತಿ ವೀರ ಶಿವಾಜಿ ಮಹಾರಾಜರಿಗೆ ಅರ್ಪಿಸುತ್ತೇನೆ ಎಂದು ಪ್ರಧಾನಿ ಹೇಳಿದರು.

ಹಿಂದೆ, ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಹಿಂದೂ ಮಹಾಸಾಗರದಲ್ಲಿ ಭದ್ರತಾ ಕಾಳಜಿಗಳನ್ನು ದೀರ್ಘಕಾಲ ನಿರ್ಲಕ್ಷಿಸಲಾಗಿದೆ.ಆದರೆ, ಇಂದು ಈ ಪ್ರದೇಶವು ನಮಗೆ ದೇಶದ ಪ್ರಮುಖ ರಕ್ಷಣಾ ಆದ್ಯತೆಯಾಗಿದೆ. ಅದಕ್ಕಾಗಿಯೇ ನಾವು ನೌಕಾಪಡೆಯ ಬಜೆಟ್ ಅನ್ನು ಹೆಚ್ಚಿಸುವುದರಿಂದ ಅದರ ಸಾಮರ್ಥ್ಯವನ್ನು ಹೆಚ್ಚಿಸುವವರೆಗೆ ಪ್ರತಿಯೊಂದು ದಿಕ್ಕಿನಲ್ಲೂ ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಹನಿ ಹನಿ ನೀರು ದೊಡ್ಡ ಸಾಗರದಂತೆ ಆಗುತ್ತದೆ.ಅದೇ ರೀತಿ, ಭಾರತದ ಪ್ರತಿಯೊಬ್ಬ ಪ್ರಜೆಯೂ ‘ಲೋಕಲ್ ಫಾರ್ ವೋಕಲ್’ ಎಂಬ ಮಂತ್ರದಂತೆ ಜೀವಿಸಲು ಪ್ರಾರಂಭಿಸಿದರೆ, ದೇಶವು ಸ್ವಾವಲಂಬಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದರು.

ವಿಕ್ರಾಂತ್ ನಮ್ಮ ಕಡಲ ವಲಯವನ್ನು ರಕ್ಷಿಸಲು ಇಳಿದಾಗ, ನೌಕಾಪಡೆಯ ಅನೇಕ ಮಹಿಳಾ ಸೈನಿಕರು ಸಹ ಅಲ್ಲಿರುತ್ತಾರೆ.ಸಾಗರದ ಅಗಾಧ ಶಕ್ತಿ, ಅಗಾಧ ಸ್ತ್ರೀ ಶಕ್ತಿ, ಇದು ನವಭಾರತದ ಉದಾತ್ತ ಗುರುತಾಗುತ್ತಿದೆ.ಇದೀಗ ಭಾರತೀಯ ನೌಕಾಪಡೆಯು ತನ್ನ ಎಲ್ಲಾ ಶಾಖೆಗಳನ್ನು ಮಹಿಳೆಯರಿಗಾಗಿ ತೆರೆಯಲು ನಿರ್ಧರಿಸಿದೆ.ಇದ್ದ ನಿರ್ಬಂಧಗಳನ್ನು ಈಗ ತೆಗೆದುಹಾಕಲಾಗುತ್ತಿದೆ.ಸಮರ್ಥ ಅಲೆಗಳಿಗೆ ಗಡಿಗಳಿಲ್ಲದಂತೆಯೇ, ಭಾರತದ ಹೆಣ್ಣುಮಕ್ಕಳಿಗೆ ಯಾವುದೇ ಗಡಿ ಅಥವಾ ನಿರ್ಬಂಧಗಳಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next