Advertisement

PM Cares ಫಂಡ್ ಗೆ ಪ್ರಧಾನಿ ಮೋದಿ ನೀಡಿರುವ ದೇಣಿಗೆ ಎಷ್ಟು ಗೊತ್ತೇ?

06:50 PM Sep 03, 2020 | Hari Prasad |

ಹೊಸದಿಲ್ಲಿ: ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಆರ್ಥಿಕ ಬಲ ತುಂಬುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಮಾರ್ಚ್ ತಿಂಗಳಿನಲ್ಲಿ ಪ್ರಾರಂಭಿಸಿದ PM Cares ಫಂಡ್ ನ ಮೊದಲ ಆಡಿಟ್ ವರದಿ ಬಹಿರಂಗಗೊಂಡಿದೆ.

Advertisement

ಮಾರ್ಚ್ 27ರಂದು ಪ್ರಾರಂಭಿಸಲಾಗಿದ್ದ ಈ ನಿಧಿಗೆ ಕೇವಲ 5 ದಿನಗಳ ಅವಧಿಯಲ್ಲಿ 3,076 ಕೋಟಿ ರೂಪಾಯಿಗಳಷ್ಟು ದೇಣಿಗೆ ಹರಿದುಬಂದಿತ್ತು. ಆದರೆ ಇದಕ್ಕೆ ಹೊರತಾಗಿ ಪ್ರಾರಂಭಿಕ ನಿಧಿಯಾಗಿ ಪ್ರಧಾನಿ ಮೋದಿ ಅವರು 2.25 ಲಕ್ಷ ರೂಪಾಯಿಗಳ ದೇಣಿಗೆಯನ್ನು ಸಲ್ಲಿಸಿದ್ದರು.

ಪ್ರಧಾನಿ ಅವರ ಈ ನಡೆಯನ್ನು ಅವರದೇ ಪಕ್ಷದ ಹಲವಾರು ನಾಯಕರು ಶ್ಲಾಘಿಸಿದ್ದಾರೆ.

ಹಾಗೆಂದು, ಪ್ರಧಾನಿ ಮೋದಿ ಅವರು ಸಾಮಾಜಿಕ ಉದ್ದೇಶಗಳಿಗಾಗಿ ದೇಣಿಗೆಯನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ.

ನರೇಂದ್ರ ಮೋದಿ ಅವರು ಇದುವರೆಗೆ ಸುಮಾರು 103 ಕೋಟಿ ರೂಪಾಯಿಗಳನ್ನು ವಿವಿಧ ಸಾಮಾಜಿಕ ಉದ್ದೇಶಗಳಿಗಾಗಿ ದೇಣಿಗೆ ನೀಡಿದ್ದಾರೆ.

Advertisement

2019ರಲ್ಲಿ ಪ್ರಧಾನಿ ಮೋದಿ ಅವರು ಕುಂಭ ಮೇಳದ ಸ್ವಚ್ಛತಾ ಕಾರ್ಮಿಕರ ಕಲ್ಯಾಣ ನಿಧಿಗಾಗಿ 21 ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡಿದ್ದರು.

ಇನ್ನು ದಕ್ಷಿಣ ಕೊರಿಯಾದಿಂದ ಸಿಯೋಲ್ ಶಾಂತಿ ಪ್ರಶಸ್ತಿಯ ಜೊತೆಗೆ ತನಗೆ ಸಿಕ್ಕಿದ 1.3 ಕೋಟಿ ರೂಪಾಯಿಗಳ ಮೊತ್ತವನ್ನು ಪ್ರಧಾನಿ ಮೋದಿ ಅವರು ಆ ಕ್ಷಣದಲ್ಲೇ ‘ನಮಾಮಿ ಗಂಗಾ’ ಯೋಜನೆಗಾಗಿ ಮೀಸಲಿಡುವ ಘೋಷಣೆಯನ್ನು ಮಾಡಿದ್ದರು.

ತನ್ನ ಬಳಿಯಲ್ಲಿದ್ದ ಸ್ಮರಣಿಕೆಗಳನ್ನು ಹರಾಜು ಹಾಕುವ ಮೂಲಕ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ 3.40 ಕೋಟಿ ರೂಪಾಯಿಗಳ ಮೊತ್ತವನ್ನು ಸಂಗ್ರಹಿಸಿ, ಪೂರ್ತಿ ಮೊತ್ತವನ್ನು ರಾಷ್ಟ್ರೀಯ ಗಂಗಾ ಸ್ವಚ್ಛತಾ ಯೋಜನೆಗೆ ಸಲ್ಲಿಸಿದ್ದರು.

ಮತ್ತು 2015ರವರೆಗೆ ತನಗೆ ಸಿಕ್ಕಿದ್ದ ಸ್ಮರಣಿಕೆಗಳನ್ನು ಹರಾಜು ಹಾಕಿ ಸಂಗ್ರಹಗೊಂಡಿದ್ದ ಹೆಚ್ಚುವರಿ 8.35 ಕೋಟಿ ರೂಪಾಯಿಗಳನ್ನೂ ಸಹ ಮೋದಿ ಅವರು ‘ನಮಾಮಿ ಗಂಗಾ ಯೋಜನೆ’ಗಾಗಿ ನೀಡಿದ್ದಾರೆ.

ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಅಧಿಕಾರಾವಧಿ ಪೂರ್ಣಗೊಂಡಿದ್ದ ಸಂದರ್ಭದಲ್ಲಿ ಮೋದಿ ಅವರು ತಮ್ಮ ಸ್ವಂತ ಉಳಿಕೆ ಮೊತ್ತದ 21 ಲಕ್ಷ ರೂಪಾಯಿಗಳನ್ನು ಗುಜರಾತ್ ಸರಕಾರದ ಸಿಬ್ಬಂದಿಗಳ ಪುತ್ರಿಯರ ಶಿಕ್ಷಣದ ಉದ್ದೇಶಕ್ಕಾಗಿ ದೇಣಿಗೆ ನೀಡಿದ್ದರು.

ಇನ್ನು, ಗುಜರಾತ್ ಮುಖ್ಯಮಂತ್ರಿಯಾಗಿದ್ದಷ್ಟು ಕಾಲ ತನಗೆ ಸಿಕ್ಕಿದ್ದ ಸ್ಮರಣಿಕೆಗಳನ್ನೆಲ್ಲಾ ಹರಾಜು ಹಾಕಿ ಅದರಿಂದ ಲಭಿಸಿದ 89.96 ಕೋಟಿ ರೂಪಾಯಿಗಳನ್ನು ಕನ್ಯಾ ಕೆಲವಾನಿ ನಿಧಿಗೆ ದೇಣಿಗೆಯಾಗಿ ನೀಡಿದ್ದರು.

ಹೀಗೆ, ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಕಾರ್ಯಗಳಿಗೆ ಮತ್ತು ಈ ಉದ್ದೇಶಗಳಿಗೆ ತಮ್ಮ ಪಾಲಿನ ದೇಣಿಗೆಯನ್ನು ನೀಡುವುದರಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next