Advertisement
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೋಮವಾರ ಪ್ರತಿಕ್ರಿಯಿಸಿ, “ಪಿಎಂ ಮೋದಿ ಆರೋಪದಿಂದ ತಮಗೆ ನೋವಾಗಿದೆ. ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಿದೆ’ ಎಂದಿದ್ದಾರೆ. ನೆರೆಯ ರಾಷ್ಟ್ರ ಪಾಕಿಸ್ಥಾನ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಆಂತರಿಕ ರಾಜಕೀಯ ವಿಚಾರಗಳಿಗೆ ನಮ್ಮನ್ನು ಎಳೆಯಬೇಡಿ. ನಿಮ್ಮ ಸಾಮರ್ಥ್ಯದಿಂದಲೇ ಚುನಾವಣೆ ಗೆಲ್ಲಬೇಕು ಎಂದು ಟಾಂಗ್ ನೀಡಿದೆ. ಈ ನಡುವೆ ಸೋಮವಾರ ಗುಜರಾತ್‌ನಲ್ಲಿ ಮೂರು ಚುನಾವಣಾ ರ್ಯಾಲಿಗಳಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿದ್ದಾರೆ.ಮಾಜಿ ಪಿಎಂ ಆಕ್ರೋಶ: ಪ್ರಧಾನಿ ಮೋದಿ ಹೇಳಿಕೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದು, ರಾಜಕೀಯ ಕಾರಣಗಳಿಗಾಗಿ ನೀಡುವ ಹೇಳಿಕೆ ಕೆಟ್ಟ ಮಾದರಿ ಹುಟ್ಟು ಹಾಕಿದಂತಾಗಿದೆ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಅವರು ದೇಶದ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ. “ಪ್ರಧಾನಿ ವಿವೇಚನೆ ಇಲ್ಲದ ಆರೋಪ ಮಾಡಿದ್ದಾರೆ. ಅದನ್ನು ಸಾರಾಸಗಟಾಗಿ ತಿರಸ್ಕರಿಸುತ್ತೇನೆ. ಪಾಕ್‌ನ ಮಾಜಿ ಸಚಿವ ಖುರ್ಷಿದ್ ಮೆಹಮೂದ್ ಕಸೂರಿ ಹೊಸದಿಲ್ಲಿಗೆ ಭೇಟಿ ನೀಡಿದ್ದ ವೇಳೆ ಆಯೋಜಿಸಲಾಗಿದ್ದ ಔತಣ ಕೂಟದಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವಿನ ವಿಚಾರ ಚರ್ಚಿಸಲಾಗಿದೆ. ಗುಜರಾತ್ ಚುನಾ ವಣೆ ವಿಚಾರ ಚರ್ಚೆಗೇ ಬಂದಿಲ್ಲ’ ಎಂದಿದ್ದಾರೆ. ಪ್ರಧಾನಿ ಮೋದಿ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಇಂಥ ಆರೋಪ ಮಾಡಿದ್ದಾರೆಂದು ಸಿಂಗ್ ಪ್ರತಿಪಾದಿಸಿದ್ದಾರೆ. ಅಲ್ಲದೆ, ಅವರು ಹೊಂದಿರುವ ಹುದ್ದೆಯ ಘನತೆಗೆ ಚ್ಯುತಿ ತರಬಾರದು ಎಂದಿದ್ದಾರೆ.
ನಮ್ಮನ್ನು ಎಳೆಯಬೇಡಿ: ಪಿಎಂ ಮೋದಿ ಆರೋಪಗಳನ್ನು ಪಾಕಿಸ್ಥಾನ ಸರಕಾರ ಕೂಡ ತಿರಸ್ಕರಿಸಿದ್ದು, ಆಂತರಿಕ ರಾಜಕೀಯ ಬೆಳವಣಿಗೆಗಳಿಗೆ ನಮ್ಮನ್ನು ಎಳೆಯಬೇಡಿ. ಇದೊಂದು ಆಧಾರರಹಿತ ಆರೋಪ ಮತ್ತು ಬೇಜವಾಬ್ದಾರಿ ಹೇಳಿಕೆ ಎಂದು ಅಲ್ಲಿನ ವಿದೇಶಾಂಗ ಇಲಾಖೆ ಹೇಳಿದೆ. ಭಾರತಸರಕಾರ ಆಂತರಿಕವಾಗಿ ಚುನಾವಣೆಗೆ ನೆರೆರಾಷ್ಟ್ರವನ್ನು ಎಳೆದು ತರುವ ಪ್ರಯತ್ನ ನಿಲ್ಲಿಸಿ, ಸ್ವಂತ ಪ್ರಯತ್ನದಿಂದಲೇ ಚುನಾವಣೆಯಲ್ಲಿ ಜಯ ಗಳಿಸಲಿ ಎಂದಿದೆ.
ಗುಜರಾತ್‌ನ ಅಹಮದಾಬಾದ್, ಪಟನ್ ಮತ್ತು ನಡಿಯಾಡ್‌ಗಳಲ್ಲಿ ಪ್ರಧಾನಿ ಮೋದಿ ಸೋಮವಾರ ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿ ದರು. ಚಿನ್ನದ ಚಮಚ ಬಾಯಿಯಲ್ಲಿಟ್ಟುಕೊಂಡು ಹುಟ್ಟಿದ ಕಾಂಗ್ರೆಸ್ ನಾಯಕರಿಗೆ ಬಡತನ ಏನೆಂಬುದೇ ಗೊತ್ತಿಲ್ಲ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯವರನ್ನುದ್ದೇಶಿಸಿ ಲೇವಡಿ ಮಾಡಿದರು. ಮೊದಲ ಹಂತದ ಚುನಾವಣೆಯಲ್ಲಿಯೇ ಕಾಂಗ್ರೆಸ್ ಸೋತಿದೆ. ಹೀಗಾಗಿಯೇ ಅವರು ಎರಡನೇ ಹಂತದ ಚುನಾವಣೆಯ ಬಗ್ಗೆ ಮಾತನಾಡುವುದನ್ನೇ ಮರೆತಿದ್ದಾರೆ. ಅದಕ್ಕಾಗಿಯೇ ಆ ಪಕ್ಷದ ನಾಯಕರು ಮತ್ತು ಚಿಯರ್ ಲೀಡರ್‌ಗಳು ಇವಿಎಂಗಳ ಬಗ್ಗೆ ಆಕ್ಷೇಪ ಎತ್ತುತ್ತಿದ್ದಾರೆ ಎಂದಿದ್ದಾರೆ. ಇದೇ ವೇಳೆ ಗಾಂಧಿನಗರದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜಿಎಸ್‌ಟಿಯನ್ನು ಮತ್ತೂಮ್ಮೆ “ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಲೇವಡಿ ಮಾಡಿದರು. ಗುಜರಾತ್‌ನಲ್ಲಿ ಕಾಂಗ್ರೆಸ್ ಮರೆಯಾಗಿದೆ ಎನ್ನುತ್ತಿದ್ದಾರೆ ಪ್ರಧಾನಿ ಮೋದಿ. ಆದರೆ ಅವರ ಪ್ರಚಾರ ಭಾಷಣದ ಶೇ.50ರಷ್ಟು ಅಂಶ ನಮ್ಮ ಪಕ್ಷದ ವಿರುದ್ಧವೇ ಆಗಿದೆ
ಎಂದಿದ್ದಾರೆ ರಾಹುಲ್.