Advertisement

PM Awas: ಬಡವರ ಮನೆ ವಂತಿಗೆ ಇನ್ನು 4.5 ಲಕ್ಷ ಬದಲು 1 ಲಕ್ಷ ರೂ.

12:55 AM Dec 22, 2023 | Team Udayavani |

ಬೆಂಗಳೂರು: ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಇಷ್ಟು ದಿನ 4.50 ಲಕ್ಷ ರೂ. ವಂತಿಗೆ ಪಾವತಿಸಬೇಕಿದ್ದ ಫ‌ಲಾನು ಭವಿಗಳು ಇನ್ನು ಮುಂದೆ 1 ಲಕ್ಷ ರೂ. ಕಟ್ಟಿದರೂ ಸೂರು ಹೊಂದುವ ಕನಸು ನನಸಾಗಲಿದೆ.

Advertisement

ಹೀಗಾಗಿ 2015ರಿಂದ ಪಿಎಂ ಆವಾಸ್‌ ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ಫ‌ಲಾನು ಭವಿಗಳು ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೆ ಅರ್ಧಕ್ಕೆ ನಿಂತಿದ್ದ ಮನೆ ಪೂರ್ಣಗೊಳಿಸಲು 500 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಮಂಜೂರು ಮಾಡಿದೆ. ಗುರುವಾರ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಬಳಿಕ ವಸತಿ ಸಚಿವ ಜಮೀರ್‌ ಖಾನ್‌ ವಿವರ ಹಂಚಿಕೊಂಡರು.

2015ರಿಂದ 1.80 ಲಕ್ಷ ಮನೆ ಮಂಜೂರು
ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 2015ರಿಂದ ರಾಜ್ಯಕ್ಕೆ ಒಟ್ಟು 1,80,253 ಮನೆಗಳು ಮಂಜೂ ರಾಗಿದ್ದವು. ಟೆಂಡರ್‌ ಪ್ರಕ್ರಿಯೆ ಪೂರ್ಣ ಗೊಂಡು ಕಾಮಗಾರಿ ಆರಂಭವಾಗಿದ್ದು, ಫ‌ಲಾನುಭವಿಗಳಿಂದ ವಂತಿಗೆ ಹಣ ಬಂದಿಲ್ಲ ಎಂಬ ಕಾರಣದಿಂದ ಯಾವ ಮನೆ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಪ್ರತೀ ಮನೆಗೆ 7.50 ಲಕ್ಷ ರೂ. ವೆಚ್ಚವಾಗಲಿದೆ. ಕೇಂದ್ರ ಸರಕಾರವು 1.50 ಲಕ್ಷ ರೂ. ನೀಡಿದರೆ ರಾಜ್ಯ ಸರಕಾರದಿಂದ ಪರಿಶಿಷ್ಟರಿಗಾದರೆ 1.50 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗದ ಜನರಿಗಾದರೆ 1.20 ಲಕ್ಷ ರೂ.ಗಳನ್ನು ಒದಗಿಸುತ್ತಿತ್ತು. ಉಳಿದ 4.50 ಲಕ್ಷ ರೂ.ಗಳನ್ನು ಫ‌ಲಾನುಭವಿಗಳು ನೀಡಬೇಕಿತ್ತು. ಇದು ಕಷ್ಟವಾದದ್ದರಿಂದ ವಿವಿಧ ಹಂತಗಳಲ್ಲಿ ಗೃಹ ನಿರ್ಮಾಣ ಕಾಮಗಾರಿಯು ನಿಂತಿದ್ದು, ಒಟ್ಟು 6,690 ಕೋಟಿ ರೂ. ಸಂದಾಯ ಬಾಕಿ ಇತ್ತು. 2018ರ ಅನಂತರ ಯಾವುದೇ ಮನೆಗಳು ರಾಜ್ಯಕ್ಕೆ ಮಂಜೂರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಫೆಬ್ರವರಿ ಒಳಗೆ 48,760 ಮನೆ ಪೂರ್ಣ?
ಹೀಗಾಗಿ ಫ‌ಲಾನುಭವಿಗಳ ಮೇಲಿನ ವಂತಿಗೆ ಹೊರೆಯನ್ನು ಇಳಿಸುವಂತೆ ರಾಜ್ಯ ಸರಕಾರಕ್ಕೆ ಎರಡು ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದ್ದೆ. ಇದನ್ನು ಪರಿಗಣಿಸಿರುವ ಸಿಎಂ ಕೇಂದ್ರ ಸರಕಾರದ 1.50 ಲಕ್ಷ ರೂ.ಗಳ ಜತೆಗೆ ಫ‌ಲಾನುಭವಿ 1 ಲಕ್ಷ ರೂ. ಕಟ್ಟಲಿ. ಉಳಿದ 4.50-5 ಲಕ್ಷ ರೂ.ಗಳನ್ನು ರಾಜ್ಯ ಸರಕಾರ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ. ಇದಕ್ಕಾಗಿ ಸಚಿವ ಸಂಪುಟ ಸಭೆಯಲ್ಲಿ 500 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ವಿವಿಧ ಹಂತಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ 48,760 ಮನೆಗಳನ್ನು ಮುಂದಿನ ಫೆಬ್ರವರಿ ತಿಂಗಳೊಳಗೆ ಪೂರ್ಣಗೊಳಿಸಿ, ಫ‌ಲಾನುಭವಿಗಳಿಗೆ ಹಂಚಿಕೆ ಮಾಡುವುದಾಗಿ ಭರವಸೆ ನೀಡಿದರು. ಹಂತಹಂತವಾಗಿ ಇನ್ನೂ 6,190 ಕೋಟಿ ರೂ. ಕೊಟ್ಟರೆ ಎಲ್ಲ 1.80 ಲಕ್ಷ ಮನೆಗಳ ಕಾಮಗಾರಿಯನ್ನೂ ಪೂರ್ಣಗೊಳಿಸಿ ಮುಂದಿನ ದಿನಗಳಲ್ಲಿ ಫ‌ಲಾನುಭವಿಗಳಿಗೆ ಹಂಚಿಕೆ ಮಾಡಲು ಚಿಂತಿಸಲಾಗಿದೆ ಎಂದು ಹೇಳಿದರು.

ವಸತಿ ಕ್ಷೇತ್ರದಲ್ಲಿ ಬಹುದೊಡ್ಡ ಹೆಜ್ಜೆ ಇರಿಸುವ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಫ‌ಲಾನುಭವಿಗಳ ಮೇಲಿನ ಹೊರೆ ಇಳಿಸಲು 2 ತಿಂಗಳ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸಭೆ ಯಲ್ಲಿ ಅನುಮೋದನೆ ದೊರೆತಿದೆ. ಕೇಂದ್ರ ಸರಕಾರವು ಶೇ. 18ರಷ್ಟು ಜಿಎಸ್‌ಟಿ ವಿನಾಯಿತಿ ನೀಡಿದರೆ ಮತ್ತಷ್ಟು ಅನುಕೂಲವಾಗಲಿದ್ದು, ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ.
-ಜಮೀರ್‌ ಅಹ್ಮದ್‌ ಖಾನ್‌, ವಸತಿ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next