ಮಂಗಳೂರು: ರೈತರು ಕೃಷಿ ಕಾರ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪೂರಕವಾಗಿ ಪುತ್ತೂರಿನ ಬಾಲಕ ರಾಕೇಶ್ ಕೃಷ್ಣ ಸಂಶೋಧಿಸಿರುವ ತಂತ್ರಜ್ಞಾನ ಮಾದರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿ, ಇನ್ನಷ್ಟು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಹುರಿದುಂಬಿಸಿದರು.
ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯತ್‌ನಲ್ಲಿ ರಾಕೇಶ್‌ನೊಂದಿಗೆ ವರ್ಚುವಲ್ ಮೂಲಕ ಸಂವಾದ ನಡೆಸಿದ ಪ್ರಧಾನಿಯವರು, ಆತ ಸಂಶೋಧಿಸಿದ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೊಂದು ಉತ್ತಮ ಸಂಶೋಧನೆಯಾಗಿದ್ದು, ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸುವಲ್ಲಿ ಪೂರಕವಾಗಲಿದೆ ಎಂದು ಪ್ರಧಾನಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ, ರಾಕೇಶ್ ಕೃಷ್ಣ ಅವರ ತಂದೆ ರವಿಶಂಕರ್ ಕೆ., ತಾಯಿ ಡಾ| ದುರ್ಗಾರತ್ನ ಉಪಸ್ಥಿತರಿದ್ದರು.
ಜಿಲ್ಲಾಡಳಿತದಿಂದ ಸಮ್ಮಾನ :
ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಅವರು ಸಮ್ಮಾನಿಸಿದರು. ಬಾಲಪ್ರತಿಭೆ ರಾಕೇಶ್ ಕೃಷ್ಣ ಅವರ ಸಾಧನೆ ಅದ್ವಿತೀಯವಾದುದು. ಪ್ರಧಾನಿಯವರು ಸಂವಾದ ನಡೆಸಿದ ಐವರಲ್ಲಿ ರಾಕೇಶ್ ಕೃಷ್ಣ ಓರ್ವರಾಗಿದ್ದಾರೆ ಎಂದವರು ಪ್ರಶಂಸಿಸಿ ಅಭಿನಂದಿಸಿದರು.