ನ್ಯೂಯಾರ್ಕ್: ಅಮೆರಿಕದಲ್ಲಿ ಕೋವಿಡ್ 19 ಸಾವುಗಳ ಸಂಖ್ಯೆ 1 ಲಕ್ಷ ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ “ನ್ಯೂಯಾರ್ಕ್ ಟೈಮ್ಸ್’ ತನ್ನ ರವಿವಾರದ ಸಂಚಿಕೆಯಲ್ಲಿ ಕೋವಿಡ್ 19ಕ್ಕೆ ಬಲಿಯಾದ 1 ಸಾವಿರ ಮಂದಿಯ ಹೆಸರನ್ನು ಮುಖಪುಟದಲ್ಲಿ ಪ್ರಕಟಿಸಿ, ಒಂದು ವಾಕ್ಯದ ಶ್ರದ್ಧಾಂಜಲಿ ಸಲ್ಲಿಸಿದೆ.
“ಇಲ್ಲಿರುವ 1 ಸಾವಿರ ಮಂದಿಯ ಹೆಸರು ಸಾವಿನ ಶೇ.1ರಷ್ಟನ್ನು ಮಾತ್ರ ಪ್ರತಿಬಿಂಬಿಸುತ್ತದೆ. ಆದರೆ, ಇವಾವುದೂ ಕೇವಲ ಸಂಖ್ಯೆಗಳಲ್ಲ’ ಎಂದು ಸಣ್ಣ ಟಿಪ್ಪಣಿಯಲ್ಲಿ ತಿಳಿಸಿದೆ. ಕೋವಿಡ್ 19 ಸೋಂಕಿತರು ಮತ್ತು ಕೋವಿಡ್ 19ಗೆ ಬಲಿಯಾ ದವರ ಸಂಖ್ಯೆಯಲ್ಲಿ ಅಮೆರಿಕ ಇಡೀ ವಿಶ್ವದ ಲ್ಲಿಯೇ ಮೊದಲ ಸ್ಥಾನದಲ್ಲಿದೆ.
ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಗಾರ ಜೋ ಡಿಫಿ (62), ಹಾರ್ವರ್ಡ್ ಕಾನೂನು ಶಾಲೆಯಲ್ಲಿ ಪದವಿ ಪಡೆದ ಮೊದಲ ಕಪ್ಪು ಮಹಿಳೆ, ನ್ಯೂಯಾರ್ಕ್ ನಗರದ 87 ವರ್ಷದ ಲೀಲಾ ಎ.ಪೆನ್ವಿಕ್ ಅವರ ಹೆಸರುಗಳು ಪಟ್ಟಿಯಲ್ಲಿವೆ.
ಈ ಮಧ್ಯೆ, ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಮೇಲೆ ಕಣ್ಣಿಟ್ಟಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ದೇಶದಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿ, ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡು ವುದಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಶನಿವಾರ ಸಂಜೆ “ದೊಡ್ಡದಕ್ಕೆ ಪರಿವರ್ತನೆ’ ಎಂಬುದಾಗಿ ಟ್ವೀಟ್ ಮಾಡಿದ್ದಾರೆ. ಆದರೆ, ಹಲವರು ಆನ್‌ಲೈನ್‌ನಲ್ಲಿ ಅವರ ಟ್ವೀಟ್‌ಗೆ ಟೀಕೆ ವ್ಯಕ್ತಪಡಿಸಿದ್ದು, ದಿಗ್ಭ್ರಮೆಗೊಳಿಸುವ ಸಾವಿನ ಸಂಖ್ಯೆಯನ್ನು ನೆನಪಿಸಿದ್ದಾರೆ.