Advertisement

ಕೆಲವರಿಗೆ ಪ್ಲಸ್‌; ಕೆಲವರಿಗೆ ಮೈನಸ್‌

11:06 AM Mar 13, 2018 | |

ಯುಎಫ್ಓ ಮತ್ತು ಕ್ಯೂಬ್‌ ಸಂಸ್ಥೆಗಳ ವಿರುದ್ಧ ಸಿಡಿದೆದ್ದಿರುವ ದಕ್ಷಿಣ ಭಾರತದ ಚಲನಚಿತ್ರರಂಗ, ಚಿತ್ರಗಳನ್ನು ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಮಾರ್ಚ್‌ 2ರಿಂದ ಹೊಸ ಚಿತ್ರಗಳ ಬಿಡುಗಡೆ ರದ್ದಾದರೆ, ಕರ್ನಾಟಕದಲ್ಲಿ ಕಳೆದ ಶುಕ್ರವಾರದಿಂದ (ಮಾರ್ಚ್‌ 9ರಿಂದ) ಯಾವುದೇ ಹೊಸ ಕನ್ನಡ ಚಿತ್ರವೂ ಬಿಡುಗಡೆಯಾಗಿಲ್ಲ.

Advertisement

ಅಷ್ಟೇ ಅಲ್ಲ, ಸಮಸ್ಯೆ ಬಗೆಹರಿಯುವವರೆಗೂ ಅನಿರ್ಧಿಷ್ಟ ಕಾಲ ಚಿತ್ರಗಳನ್ನು ಬಿಡುಗಡೆ ಮಾಡದಿರುವುದಕ್ಕೆ ತೀರ್ಮಾನಿಸಲಾಗಿದೆ. ಮುಂದಿನ ವಾರ ಹೇಗೋ ಗೊತ್ತಿಲ್ಲ. ಆದರೆ, ಈ ವಾರ ಯಾವುದೇ ಚಿತ್ರ ಬಿಡುಗಡೆಯಾಗುತ್ತಿಲ್ಲ. ಕಳೆದ ವಾರ ಯಾವುದೇ ಚಿತ್ರ ಬಿಡುಗಡೆಯಾಗದ ಕಾರಣ, ತಮ್ಮ ಚಿತ್ರಕ್ಕೆ ಪ್ಲಸ್‌ ಆಯಿತು ಎನ್ನುತ್ತಾರೆ “ಪ್ರೀತಿಯ ರಾಯಭಾರಿ’ ಚಿತ್ರದ ನಿರ್ದೇಶಕ ಮುತ್ತು.

“ನಮ್ಮ ಚಿತ್ರ ಸುಮಾರು 80 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮೊದಲ ವಾರ ನಿಧಾನವಾಗಿಯೇ ಜನರ ಬರತೊಡಗಿದರು. ಎರಡನೇ ವಾರ ಯಾವ ಚಿತ್ರಗಳೂ ಬಿಡುಗಡೆಯಾಗದ ಕಾರಣ, ನಮ್ಮ ಚಿತ್ರದ ಬಗ್ಗೆ ಅದಾಗಲೇ ಒಂದಷ್ಟು ಉತ್ತುಮ ಪ್ರತಿಕ್ರಿಯೆ ಹರಿದಾಡಿತ್ತು. ಜನರಿಗೂ ಬೇರೆ ಸಿನಿಮಾ ನೋಡಲು ಬೇರೆ ಆಯ್ಕೆ ಇರಲಿಲ್ಲ. ಅನಿವಾರ್ಯ ಎಂಬಂತೆ “ಪ್ರೀತಿಯ ರಾಯಭಾರಿ’ ಚಿತ್ರ ವೀಕ್ಷಿಸಲು ಬಂದರು.

ಬಂದವರೆಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಾ ಹೋಯ್ತು. ಜನರಿಗೂ ಕೂಡ ಚಿತ್ರ ತಲುಪಿತು. ಮೊದಲ ವಾರದಲ್ಲಿ ಹೇಳಿಕೊಳ್ಳುವಂತಹ ಗಳಿಕೆ ಇರಲಿಲ್ಲ. ಎರಡನೇ ವಾರದಿಂದ ಮೆಲ್ಲನೆ ಹೆಚ್ಚಳವಾಗಿದೆ. ಮುಂದಿನ ವಾರದಿಂದ 16 ಚಿತ್ರಮಂದಿರಗಳನ್ನು ಹೆಚ್ಚಿಸುವ ಯೋಚನೆ ಇದೆ. ಹೊಸ ಚಿತ್ರಗಳು ಬಿಡುಗಡೆಯಾಗದಿರುವುದರಿಂದ ನಮಗೆ ಸ್ವಲ್ಪ ಒಳ್ಳೆಯದಾಗಿದೆ.

ಯಾವುದೇ ಹೊಸಬರ ಚಿತ್ರವಿರಲಿ, ಒಂದು ವಾರದವರೆಗೆ ಬೇಗನೆ ಪಿಕಪ್‌ ಆಗೋದಿಲ್ಲ. ಈಗ ಎರಡನೇ ವಾರ ಚೆನ್ನಾಗಿ ಹೋಗುತ್ತಿದೆ. ಮೂರನೆ ವಾರ ಇನ್ನೂ ಚೆನ್ನಾಗಿ ಪ್ರದರ್ಶನ ಕಾಣುತ್ತೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಮುತ್ತು. ಹಾಗಂತ ಎಲ್ಲರಿಗೂ ಈ ಗ್ಯಾಪ್‌ ಅನುಕೂಲವಾಯಿತು ಎಂದು ಹೇಳುವುದು ಕಷ್ಟ. “ಪ್ರೀತಿಯ ರಾಯಭಾರಿ’ ಚಿತ್ರತಂಡದವರಿಗೆ ಇದು ಪ್ಲಸ್‌ ಆದರೆ, ಬೇರೆ ಚಿತ್ರತಂಡದವರಿಗೆ ಮೈನಸ್‌ ಆಗಿದೆ.

Advertisement

ಉದಾಹರಣೆಗೆ, “3000′ ಎಂಬ ಚಿತ್ರವು ರಾಜ್ಯಾದ್ಯಂತ ಸುಮಾರು 110 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮೊದಲ ವಾರದ ಗಳಿಕೆ ಕಡಿಮೆಯಾಗಿತ್ತು. ಎರಡನೇ ವಾರ ಸರಿ ಹೋಗಬಹುದು ಎಂಬ ಚಿತ್ರತಂಡದವರ ಆಸೆ ನಿರಾಸೆಯಾಯಿತು. ಅದಕ್ಕೆ ಕಾರಣವೂ ಇದೆ. “ಕಳೆದ ವಾರ ಚಿತ್ರ ಬಿಡುಗಡೆಯಾಗದಿದ್ದ ಕಾರಣ, ನಮಗೆ ಯಾವ ಅನುಕೂಲವೂ ಆಗಲಿಲ್ಲ.

ಏಕೆಂದರೆ, ಕಲೆಕ್ಷನ್‌ ಕಡಿಮೆ ಇತ್ತು. ಕಲೆಕ್ಷನ್‌ ಕಡಿಮೆ ಇದ್ದುದರಿಂದ ಬಾಡಿಗೆ ಕಟ್ಟಲು ಆಗಲಿಲ್ಲ. ಹಾಗಾಗಿ ಒಂದೇ ವಾರಕ್ಕೆ ಚಿತ್ರವನ್ನು ತೆಗೆಯಬೇಕಾಯಿತು. ಚಿತ್ರಮಂದಿರದ ಬಾಡಿಗೆ ಹಣವೂ ಬಂದಿಲ್ಲ’ ಎನ್ನುತ್ತಾರೆ “3000′ ಚಿತ್ರದ ತಂಡದವರು. ಇನ್ನು “ಚಿನ್ನದ ಗೊಂಬೆ’ ತಂಡದವರೂ ಇದೇ ಸಮಸ್ಯೆಯನ್ನು ಎದುರಿಸಿದ್ದಾರೆ. “ಇದು ನಮಗೆ ಪ್ಲಸ್‌ ಆಗುತ್ತೆ ಅಂದುಕೊಂಡರೆ, ಅದು ಮೈನಸ್‌ ಆಯ್ತು.

ಸ್ವಪ್ನ ಚಿತ್ರಮಂದಿರಕ್ಕೆ ಚಿತ್ರವನ್ನು ಶಿಫ್ಟ್ ಮಾಡಿದರೂ ಪ್ರಯೋಜನವಾಗಿಲ್ಲ. ಒಂದು ಕೋಟಿ ಖರ್ಚು ಮಾಡಿದ್ದೇವೆ. ಯುಎಫ್ಓ, ಕ್ಯೂಬ್‌ಗ ಹಾಕಿರುವ ಸುಮಾರು 8 ಲಕ್ಷ ರೂ ಕೂಡ ಹಿಂದಿರುವುದಿಲ್ಲ. ಆಗಿರುವ ಗಳಿಕೆಯಲ್ಲಿ ಥಿಯೇಟರ್‌ಗೆ ಪರ್ಸಂಟೇಜ್‌ ಕೊಟ್ಟರೆ, ಉಳಿಯೋ ಹಣವೂ ಕೈಗೆ ಸಿಗೋದಿಲ್ಲ’ ಎಂದು ಬೇಸರದಿಂದಲೇ ಹೇಳಿಕೊಳ್ಳುತ್ತಾರೆ ನಿರ್ಮಾಪಕ ಕೃಷ್ಣಪ್ಪ.

Advertisement

Udayavani is now on Telegram. Click here to join our channel and stay updated with the latest news.

Next