Advertisement

ಪ್ಲಸ್ಸು-ಮೈನಸ್ಸುಗಳ ಸಮಾಗಮ

11:34 AM Oct 06, 2018 | |

“ಅವಳು ಪ್ರೀತಿಯನ್ನು ಪೂಜಿಸುತ್ತಾಳೆ. ಅವನು ಆ ಪ್ರೀತಿಯನ್ನು ದ್ವೇಷಿಸುತ್ತಾನೆ. ಅವನೊಬ್ಬ ಮೇಧಾವಿ ಕಟುಕ. ಅವಳು ಅವನಷ್ಟೇ ಕಟುಕಿ. ತನ್ನ ಗುರುವಿನ ಕುಟುಂಬ ಹಾಳು ಮಾಡಿದ ಶ್ರೀಮಂತ ವ್ಯಕ್ತಿಗೆ ಬುದ್ಧಿ ಕಲಿಸಲು ಅವನು ಹೊರಟರೆ, ತನ್ನ ಅಪ್ಪನನ್ನು ಅವಮಾನಿಸಿದ ಕಾರಣಕ್ಕೆ ಪ್ರೀತಿಸಿದವನನ್ನೇ ಸೋಲಿಸಲು ಅವಳು ಹೊರಡುತ್ತಾಳೆ. ಅತ್ತ, ಹಣ ಪಡೆದು ಮಗನನ್ನೇ ಹತ್ಯೆ ಮಾಡಲು ಮುಂದಾಗುವ ಅಪ್ಪ,ಅಮ್ಮ…?

Advertisement

ಇದನ್ನು ಓದಿದ ಮೇಲೆ ಒಂದಷ್ಟು ಗೊಂದಲ ಎನಿಸಬಹುದು. ಯಾರು, ಏನು, ಎತ್ತ ಎಂಬ ಪ್ರಶ್ನೆ ಕಾಡಬಹುದು. ಸಿನಿಮಾ ನೋಡಿದಾಗಲೂ ಇಂತಹ ಅದೆಷ್ಟೋ ಗೊಂದಲಗಳು ಎದುರಾಗುತ್ತವೆ. ಹಾಗಂತ, ಬುದ್ಧಿವಂತರಿಗೆ ಮಾತ್ರ ಈ ಚಿತ್ರವಲ್ಲ. ಇನ್ನಷ್ಟು “ಬುದ್ಧಿ’ಯನ್ನು ಖರ್ಚು ಮಾಡಿದ್ದರೆ ಇದೊಂದು ಒಳ್ಳೆಯ ಸಿನಿಮಾ ಆಗುವ ಸಾಧ್ಯತೆ ಇತ್ತು. ಇಲ್ಲಿ “ಪ್ಲಸ್‌’ ಆಗುವ ಅಂಶಗಳನ್ನು ಹುಡುಕುವುದು ಕಷ್ಟ. ಆದರೆ, ನಿರ್ದೇಶಕರ ನಿರೂಪಣೆಯಲ್ಲಿರುವ ಜಾಣತನ ಅವರಿಗೆ ಕೊಂಚ “ಪ್ಲಸ್‌’ ಆಗಬಹುದಷ್ಟೇ.

“ಎ’ ಚಿತ್ರಕ್ಕೂ “ಎ ಪ್ಲಸ್‌’ ಚಿತ್ರಕ್ಕೂ ಏನಾದರೂ ಸಂಬಂಧವಿದೆಯಾ? ಖಂಡಿತ ಇಲ್ಲ. ಆದರೆ, ಈ ಚಿತ್ರದ ನಿರ್ದೇಶಕರು ಉಪೇಂದ್ರ ಅವರ ಜೊತೆ ಕೆಲಸ ಮಾಡಿರುವುದರಿಂದ ಆ “ಛಾಯೆ’ “ಪ್ಲಸ್‌’ ಆಗಿದೆ. ಚಿತ್ರ ನೋಡಿದವರಿಗೆ “ಎ’ ಚಿತ್ರ ನೆನಪಾದರೆ ಅಚ್ಚರಿಯಿಲ್ಲ. ಆದರೆ, ಅದರಷ್ಟು ಮಜ ಅಂತ ಹೇಳುವುದು ಕಷ್ಟ. ಇಲ್ಲೂ ರಿವರ್ಸ್‌ ಸ್ಕ್ರೀನ್‌ಪ್ಲೇ ಇದೆ. ಪದೇ ಪದೇ ಬರುವ ದೃಶ್ಯಗಳು ಒಂದೊಂದೇ ಪ್ರಶ್ನೆಗೆ ಉತ್ತರ ಕೊಡುತ್ತಾ ಹೋಗುತ್ತವೆ.

“ಎ’ ಚಿತ್ರದ ಹೂರಣ ಇಲ್ಲಿರದಿದ್ದರೂ, ಅಲ್ಲಿದ್ದ “ಕಟುಸತ್ಯ’ದ ಮರುರೂಪ ಎನ್ನಲ್ಲಡ್ಡಿಯಿಲ್ಲ. ಇಲ್ಲೂ ಪ್ರೀತಿ, ಪ್ರೇಮ, ಬದನೆಕಾಯಿ ವಿಷಯಗಳಿವೆ, ಕೆಟ್ಟ ಸಮಾಜದ ಚಿತ್ರಣವಿದೆ, ಹೆತ್ತವರ ಬೈಗುಳ, ಮರುಕವಿದೆ, ಮೋಸ, ವಂಚನೆಯ ಸ್ಪರ್ಶವೂ ತುಂಬಿದೆ. ಇವೆಲ್ಲವನ್ನೂ ನೇರವಾಗಿ ಹೇಳದೆ, ಕಥೆಯನ್ನು ಎಲ್ಲೆಲ್ಲಿಗೋ ಕೊಂಡೊಯ್ದು, ಕೊನೆಗೆ ಅದಕ್ಕೊಂದು ದೃಶ್ಯರೂಪ ಕಟ್ಟಿ ಅರ್ಥಪೂರ್ಣವಾಗಿಸುವ ಮೂಲಕ ಎಲ್ಲಾ ಗೊಂದಲ, ಪ್ರಶ್ನೆಗಳಿಗೂ ಉತ್ತರ ಕೊಡುವ ಪ್ರಯತ್ನ ಮಾಡಿರುವುದೇ ಸಮಾಧಾನ.

ಆರಂಭದಲ್ಲಿ ಯಾವ ದೃಶ್ಯವಿದು, ಅದು ಎತ್ತೆತ್ತ ಸಾಗುತ್ತೆ ಅಂತ ಯೋಚಿಸುವ ಹೊತ್ತಿಗೆ, ಆ ದೃಶ್ಯಗಳು ಬಂದದ್ದು ಯಾಕೆ, ಅಲ್ಲೇನು ನಡೆಯಿತು ಎಂಬುದನ್ನು ಅಷ್ಟೇ, ಸ್ಪಷ್ಟವಾಗಿ ತೋರಿಸುವ ಮೂಲಕ ಸಿನಿಮಾ ಕಥೆ ಮುಂದೇನಾಗುತ್ತೆ ಎಂಬ ಸಣ್ಣ ಪ್ರಶ್ನೆಯೊಂದಿಗೆ ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು ನಿರೂಪಣೆಯಿಂದಾಗಿದೆ. ಅದೊಂದೇ ಇಲ್ಲಿ “ಪ್ಲಸ್‌’. ಮೊದಲರ್ಧ ಶುರುವಾಗಿ, ಆ ಸಿನಿಮಾದ ಕಥೆ ಅರ್ಥ ಮಾಡಿಕೊಳ್ಳುವ ಹೊತ್ತಿಗೆ, ಮಧ್ಯಂತರ ಬಂತಲ್ಲ ಎಂಬ ಸಣ್ಣ ಅಚ್ಚರಿಯಾದರೂ, ಅಲ್ಲೊಂದು ತಿರುವು ಕೊಟ್ಟು ನೋಡುಗರ ತಾಳ್ಮೆಯನ್ನು ಸಮಾಧಾನಪಡಿಸಲಾಗಿದೆ.

Advertisement

ಕೆಲ ದೃಶ್ಯಗಳಲ್ಲಿ ಉಪೇಂದ್ರ ಅವರ ಸಿನಿಮಾದ ಡೈಲಾಗ್‌ಗಳು ನೆನಪಾದರೂ, ಅವು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಇಲ್ಲಿ ಕಥೆಗಿಂತ ಚಿತ್ರಕಥೆ ವೇಗವಾಗಿದೆ. ಅದೂ ಚಿತ್ರದ “ಪ್ಲಸ್‌’ ಆದರೆ, ಅದಕ್ಕೆ ಕೊಟ್ಟಷ್ಟು ಒತ್ತು, ಹಿನ್ನೆಲೆ ಸಂಗೀತಕ್ಕೆ ಕೊಡಬಹುದಿತ್ತು. ಇಂತಹ ಚಿತ್ರಗಳಿಗೆ ಹಾಡು ಬೇಕಿಲ್ಲ. ಇಲ್ಲಿ ಅದೂ ಇಲ್ಲವೂ ಇಲ್ಲ. ಆದರೂ, ಗೊಂದಲದಲ್ಲೇ ನೋಡಿಸಿಕೊಂಡು ಹೋಗಿ, ಅಲ್ಲಲ್ಲೇ, ಉತ್ತರ ಕೊಡುತ್ತ ಸಾಗಿರುವುದಷ್ಟೇ ಚಿತ್ರದ ಪ್ಲಸ್ಸು.

ಇಲ್ಲಿ ನಿರ್ದೇಶಕನಾಗಬಯಸುವವನ ಕಥೆ, ವ್ಯಥೆ ಇದೆ. ನಿರ್ದೇಶಕನಾಗಬೇಕೆಂದು ಹೊರಡುವ “ಬುದ್ಧಿ’ವಂತನಿಗೆ ಉಳ್ಳವನ ಕಾಟವಿದೆ, ಪ್ರೀತಿಸೋ ಹುಡುಗಿಯ ಮೋಸವಿದೆ, ಸುಳ್ಳು ಮನಸ್ಸಿನ ನಿಜ ಚಿತ್ರಣವಿದೆ. ಹದಗೆಟ್ಟ ಸಮಾಜದ ಸುಳ್ಳಿನ ಕಂತೆಯಿದೆ. ಇವೆಲ್ಲವನ್ನೂ ಚಿತ್ರಿಸಿ, ತೋರಿಸಬೇಕೆಂಬ ನಿರ್ದೇಶಕನ ಹಂಬಲ ಈಡೇರುತ್ತೋ ಇಲ್ಲವೋ ಎಂಬುದೇ ಕಥೆ. ಬುದ್ಧಿ ಖರ್ಚು ಮಾಡಿ ಸಿನಿಮಾ ನೋಡುವಂಥದ್ದೇನಿಲ್ಲ. ನೋಡುವ ಮನಸ್ಸಿದ್ದರೆ ಹೋಗಲ್ಲಡ್ಡಿಯಿಲ್ಲ.

ಸಿದ್ದು ಸಿಕ್ಕ ಪಾತ್ರವನ್ನು ಚೆನ್ನಾಗಿ ಕಟ್ಟುಕೊಟ್ಟಿದ್ದಾರೆ. ಆದರೆ, ಧ್ವನಿಯಲ್ಲಿನ್ನೂ “ಗಡಸು’ ಬೇಕು. ಸಂಗೀತಾ ಪ್ರೀತಿಸುವ ಹುಡುಗಿಗಿಂತ, ಮೋಸ ಮಾಡುವ ಹುಡುಗಿಯಾಗಿ ಇಷ್ಟವಾಗುತ್ತಾರೆ. ಮಧುಸೂದನ್‌ ಕಾಟ ಕೊಡುವ ವ್ಯಕ್ತಿಯಾಗಿ ಅಬ್ಬರಿಸಿದ್ದಾರೆ. ಉಳಿದಂತೆ ಪ್ರಶಾಂತ್‌ ಸಿದ್ಧಿ, ಆಶಾರಾಣಿ ಗಮನಸೆಳೆಯುತ್ತಾರೆ. ಭುಪೇಂದರ್‌ ಸಿಂಗ್‌ ರೈನ ಕ್ಯಾಮೆರಾ ಚಿತ್ರದ “ಪ್ಲಸ್‌’.

ಚಿತ್ರ: ಎ ಪ್ಲಸ್‌
ನಿರ್ಮಾಣ: ಪ್ರಭುಕುಮಾರ್‌
ನಿರ್ದೇಶನ: ವಿಜಯ್‌ ಸೂರ್ಯ
ತಾರಾಗಣ: ಸಿದ್ದು, ಸಂಗೀತಾ, ಮಧುಸೂದನ್‌, ಮುರಳಿ ಮೋಹನ್‌, ಪ್ರಶಾಂತ್‌ ಸಿದ್ದಿ, ಆಶಾರಾಣಿ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next