Advertisement

ಕೇರಳದಲ್ಲಿ ಆತ್ಮಹತ್ಯಾ ದಾಳಿಗೆ ಸಂಚು?

03:05 AM Apr 30, 2019 | Team Udayavani |

ನವದೆಹಲಿ: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಆತ್ಮಹತ್ಯಾ ಬಾಂಬ್‌ ದಾಳಿ ಮಾದರಿಯಲ್ಲಿ ಕೇರಳದಲ್ಲಿ ಸ್ಫೋಟದ ಸಂಚು ನಡೆಸುವ ಘಾತಕ ಕೃತ್ಯದ ಸಂಚು ಬಯಲಾಗಿದೆ. ಭಾನುವಾರ ಕೇರಳದ ಪಾಲಕ್ಕಾಡ್‌ನಿಂದ ವಿಚಾರಣೆಗಾಗಿ ಕೊಚ್ಚಿಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಚೇರಿಗೆ ಕರೆಯಿಸಿಕೊಳ್ಳಲಾಗಿದ್ದ ರಿಯಾಜ್‌ ಅಲಿಯಾಸ್‌ ರಿಯಾಸ್‌ ಅಬೂಬಕರ್‌ ಅಲಿಯಾಸ್‌ ಅಬು ದುಜಾನಾ (29) ಎಂಬಾತನ ವಿಚಾರಣೆ ನಡೆಸಿದ ವೇಳೆ ಸಂಚನ್ನು ಒಪ್ಪಿಕೊಂಡಿದ್ದಾನೆ.

Advertisement

ಶ್ರೀಲಂಕಾದಲ್ಲಿ ಸರಣಿ ಸ್ಫೋಟ ನಡೆಸಿದೆ ಎಂದು ಶಂಕಿಸಲಾಗಿರುವ ನ್ಯಾಷನಲ್ ತೌಹೀತ್‌ ಜಮ್ಮತ್‌ನ ನಾಯಕ ಝಹರನ್‌ ಹಶೀಂನಿಂದ ರಿಯಾಜ್‌ ಪ್ರೇರಿತನಾಗಿದ್ದ. ಒಂದು ವರ್ಷದಿಂದ ಹಶೀಂ ಹಾಗೂ ತಲೆಮರೆಸಿಕೊಂಡಿರುವ ವಿವಾದಿತ ಇಸ್ಲಾಮಿಕ್‌ ಧಾರ್ಮಿಕ ವಿದ್ವಾಂಸ ಡಾ.ಝಕೀರ್‌ ನಾಯ್ಕನ ಭಾಷಣಗಳನ್ನು ಆಲಿಸಿದ್ದ. ಕಾಸರಗೋಡಿನಲ್ಲಿದೆ ಎಂದು ಶಂಕಿಸಲಾಗಿರುವ ಐಸಿಸ್‌ ಉಗ್ರ ಸಂಘಟನೆಯ ಬೆಂಬಲಿಗರ ತಂಡದ ಮೂಲಕ ಕೇರಳದಲ್ಲಿ ತಾನೇ ಒಂದು ಆತ್ಮಹತ್ಯಾ ದಾಳಿ ನಡೆಸಲು ತೀರ್ಮಾನಿಸಿದ್ದನ್ನು ರಿಯಾಜ್‌ ಒಪ್ಪಿಕೊಂಡಿರುವುದ್ದಾನೆಂದು ಎನ್‌ಐಎ ತಿಳಿಸಿದೆ.

ಹಲವರ ಜತೆ ಲಿಂಕ್‌: ಭಾನುವಾರದಿಂದಲೇ ಈತನ ವಿಚಾರಣೆ ಕೈಗೊಂಡಿರುವ ಎನ್‌ಐಎಗೆ ಹಲವಾರು ಮಹತ್ವದ ಅಂಶಗಳು ಸಿಕ್ಕಿವೆ ಎನ್ನಲಾಗಿದೆ.

ತಲೆಮರೆಸಿಕೊಂಡಿರುವ ಅಬ್ದುಲ್ ರಶೀದ್‌ ಅಬ್ದುಲ್ಲಾ ಜತೆಗೆ ಈತ ಆನ್‌ಲೈನ್‌ ಮೂಲಕ ಸಂಪರ್ಕದಲ್ಲಿ ಇದ್ದಿದ್ದಾಗಿ ಹೇಳಿಕೊಂಡಿದ್ದಾನೆ. ರಶೀದ್‌ನ ಭಾಷಣಗಳು, ಧರ್ಮದ ಬೋಧನೆಗಳಿಗೂ ತಾನು ಮರುಳಾಗಿರುವುದಾಗಿ ಆತ ಹೇಳಿದ್ದಾನೆ. ಅಲ್ಲದೆ, ಆತನ ಭಾಷಣಗಳ ವಿಡಿಯೋ ಕ್ಲಿಪ್‌ಗ್ಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಇತರರೂ ಆತನಿಂದ ಸ್ಫೂರ್ತಿಗೊಳ್ಳುವಂತೆ ಪ್ರಯತ್ನಿಸುತ್ತಿದ್ದುದಾಗಿ ಆತ ಎನ್‌ಐಎ ಮುಂದೆ ಮುಂದೆ ಬಾಯಿಬಿಟ್ಟಿದ್ದಾನೆ ಎಂದು ‘ಮಲಯಾಳ ಮನೋರಮ’ ವರದಿ ಮಾಡಿದೆ.

ಇದಲ್ಲದೆ, ವಾಲಪಟ್ಟಣಂ ಇಸ್ಲಾಮಿಕ್‌ ಸ್ಟೇಟ್ ಸಂಘಟನೆಯ ಪ್ರಕರಣದ ಆರೋಪಿ ಹಾಗೂ ಸಿರಿಯಾಕ್ಕೆ ಹೋಗಿ ತಲೆಮರೆಸಿಕೊಂಡಿದ್ದಾನೆಂದು ಹೇಳಲಾಗಿರುವ ಅಬ್ದುಲ್ ಖಯೂಮ್‌ ಜತೆಗೂ ಆನ್‌ಲೈನ್‌ ಮೂಲಕ ತಾನು ಸಂಪರ್ಕದಲ್ಲಿ ಇದ್ದಿದ್ದಾಗಿ ರಿಯಾಸ್‌ ತಿಳಿಸಿದ್ದಾನೆಂದು ಹೇಳಲಾಗಿದೆ.

Advertisement

ಇಂದು ಕೋರ್ಟ್‌ಗೆ ಹಾಜರು
ಎನ್‌ಐಎ ಹೇಳಿರುವ ಪ್ರಕಾರ, ಭಾನುವಾರ ವಶಕ್ಕೆ ಪಡೆಯಲಾದ ಮೂವರು ವ್ಯಕ್ತಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ, 2016ರ ಜುಲೈನಲ್ಲಿ ಕಾಸರಗೋಡಿನಿಂದ 15 ಯುವಕರು ಏಕಾಏಕಿ ನಾಪತ್ತೆಯಾಗಿದ್ದ ಹಾಗೂ ಅವರೆಲ್ಲರೂ ಐಸಿಸ್‌ ಸಂಘಟನೆಗೆ (14 ಮಂದಿ ಅಪ್ಗಾನಿಸ್ತಾನಕ್ಕೆ, ಒಬ್ಬ ಸಿರಿಯಾಕ್ಕೆ) ಸೇರಲು ತೆರಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇದೀಗ, ಕೇರಳದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿರುವ ಅಬೂಬಕರ್‌ನನ್ನು ಕೊಚ್ಚಿಯಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಮಂಗಳವಾರ ಹಾಜರು ಪಡಿಸುವುದಾಗಿ ಎನ್‌ಐಎ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next