ಕೋಣೆ ಸೇರಿಕೊಂಡು ಬಾಗಿಲು ಮುಚ್ಚಿ ಪತ್ರ ಓದತೊಡಗಿದೆ. ಅದರಲ್ಲಿರುವುದು ಕೇವಲ ಅಕ್ಷರಗಳಲ್ಲ, ನಿನ್ನ ಹೃದಯದ ತುಣುಕುಗಳು ಅನಿಸಿತು. ನಾನೀಗ ನಿನ್ನ ಪ್ರೀತಿಗೆ ಶರಣಾಗಿದ್ದೇನೆ.
ಏ ಕನಸುಗಾರ ಹುಡುಗ,
ನಾನು ಹೀಗೊಂದು ಪತ್ರ ಬರೆಯುತ್ತೇನೆ ಎಂಬುದನ್ನು ನನಗೇ ನಂಬಲಾಗ್ತಿಲ್ಲ. ನನ್ನ ಮೇಲೆ ನಿನಗೆ ಗೆಳೆತನಕ್ಕಿಂತ ಹೆಚ್ಚಿನದೇನೋ ಇದೆಯೆಂದು ಅನಿಸತೊಡಗಿತ್ತು. ಗೆಳೆಯರ ಗುಂಪಲ್ಲಿರುವಾಗ ನೀನು ನನ್ನ ಜೊತೆ ಹುಸಿ ಗಾಂಭೀರ್ಯದಿಂದ ವರ್ತಿಸುವುದು, ನನ್ನೊಂದಿಗೆ ಎಲ್ಲರೆದುರು ಕಡಿಮೆ ಮಾತನಾಡುವುದು ಹೀಗೆಲ್ಲಾ ವಿಚಿತ್ರವಾಗಿ ವರ್ತಿಸುತ್ತಿದ್ದೆ. ಆದರೆ, ದಿನಕಳೆದಂತೆ ನೀನು ಪ್ರೀತಿಯಿಂದ ಹುಚ್ಚನಂತಾಗುತ್ತಿದ್ದುದನ್ನು ನಾನು ಗಮನಿಸಿದೆ. ನೀನು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಒಬ್ಬಂಟಿಯಾಗಿ ಕುಳಿತಿರುತ್ತಿದ್ದೆ. ಅಂಥ ಒಂದೆರಡು ಸಂದರ್ಭದಲ್ಲಿ ನಿನ್ನ ಬಳಿ ಬಂದಾಗ, ನಿನ್ನ ಸ್ವರ ಕಂಪಿಸುವುದನ್ನು, ಮಾತು ತಡವರಿಸುವುದನ್ನೂ ಗಮನಿಸಿದ್ದೆ. ನೆಪ ಹುಡುಕಿ ನನ್ನಲ್ಲಿ ಒಬ್ಬಂಟಿಯಾಗಿ ಮಾತಾಡಲು ನಾನು ಪ್ರಯತ್ನಿಸುತ್ತಿದ್ದೆ. ನೀನು ಉಳಿದ ಹುಡುಗರಿಗಿಂತ ಭಿನ್ನವಾಗಿ ನನ್ನೊಂದಿಗೆ ವ್ಯವಹರಿಸುವುದನ್ನು ಕಂಡಾಗಲೇ ನನಗೆಲ್ಲಾ ಅರ್ಥವಾಗಿತ್ತು.
ಆಗ ನಿನ್ನ ಮೇಲೆ ಅಸಾಧ್ಯ ಕೋಪ ಬಂದಿತ್ತು. ಗೆಳೆತನದ ಸೋಗಿನಲ್ಲಿ ಪ್ರೀತಿ ಮಾಡಲು ಹೊರಟ ನಿನ್ನ ಬಗ್ಗೆ ಜಿಗುಪ್ಸೆ ಮೂಡಿತ್ತು. ಎಲ್ಲರೆದುರು ಕಪಾಳಕ್ಕೆರಡು ಬಿಗಿಯಬೇಕು ಅಂದುಕೊಂಡಿದ್ದೆ. “ನಿನ್ನ ಮೂರ್ಖತನದ ಆಸೆ ಈಡೇರುವುದಿಲ್ಲ’ ಎಂದು ಹೇಳಬೇಕೆಂದುಕೊಂಡಿದ್ದೆ. ಆದರೆ, ಚಾಕಲೇಟ್ ಬಾಯ…ನಂಥ ನಿನ್ನ ಮುದ್ದು ಮುಖ, ಉತ್ತಮ ಗುಣ ನಡತೆ, ನಿನ್ನ ಟ್ಯಾಲೆಂಟ್ ನನ್ನ ಕೋಪವನ್ನೆಲ್ಲ ಕರಗಿಸಿತ್ತು. ನಿನ್ನ ಜೊತೆ ಒರಟಾಗಿ ವರ್ತಿಸುವುದು ಬೇಡ. ಆದರೆ ನಿನ್ನನ್ನು ಪ್ರೀತಿಸಲೂಬಾರದು ಎಂಬ ಅಚಲ ನಿರ್ಧಾರ ಕೈಗೊಂಡೆ.
ಆದರೆ, ಇತ್ತೀಚೆಗೆ ಯಾಕೋ, ನನ್ನ ಹುಡುಗ ಹೇಗಿರಬೇಕು ಅಂತ ಸುಮ್ಮನೆ ಯೋಚಿಸಿದೆ. ಸುಮ್ಮನೆ ಬೇರೆ ಬೇರೆ ಹುಡುಗರ ವರ್ತನೆ, ಸ್ವಭಾವಗಳನ್ನು ಗಮನಿಸತೊಡಗಿದೆ. ಆದರೆ ಯಾರೊಬ್ಬರೂ ನಿನಗೆ ಸಮ ಅನಿಸಲೇ ಇಲ್ಲ. ನಿನಗಿಂತ ಯಾಕೋ ಅವರೆಲ್ಲಾ ತುಂಬಾ ಕೆಳಗಿದ್ದಾರೆ ಅನಿಸಿತು. ಒಬ್ಬ ಆದರ್ಶ ಯುವಕನಾಗಿ ನನ್ನ ಕಣ್ಣ ಮುಂದೆ ಮೂಡುವ ಚಿತ್ರ ನಿನ್ನದಷ್ಟೇ ಆಗಿತ್ತು. ನಿನ್ನ ಮೇಲೆ ರೇಗಿದ್ದರ ಬಗ್ಗೆ ಮನಸ್ಸಿಗೇಕೋ ನೋವಾಗತೊಡಗಿತ್ತು.
ಅದಕ್ಕಾಗಿಯೇ ನಿನ್ನೆ, ಕಾಲೇಜಿನ ಗುಲ್‌ಮೊಹರ್ ಮರದಡಿಯಲ್ಲಿ ನಿಂತು ನೀನು ನನ್ನಲ್ಲಿ ಏನೋ ಮಾತಾಡಲು ಯತ್ನಿಸಿದೆ. ನನ್ನ ಪ್ರತಿಕ್ರಿಯೆಗೆ ಹೆದರಿ ಒಂದು ಕಾಗದವನ್ನು ಕೈಗೆ ತುರುಕಿ “ಮನೆಗೆ ಹೋಗಿ ಓದು’ ಎಂದಷ್ಟೇ ಹೇಳಿ ಬಿರುಸಿನಿಂದ ನಡೆದು ಮರೆಯಾದೆ. ಮೊದಲಾಗಿದ್ದರೆ ಅದನ್ನು ಕಣ್ಣೆತ್ತಿಯೂ ನೋಡದೇ ಹರಿದು ಕಸದ ಬುಟ್ಟಿಗೆ ಹಾಕುತ್ತಿದ್ದೆ. ಆದರೆ ನನ್ನ ಬದಲಾದ ಮನಸ್ಸಿಗೆ ಅದನ್ನು ಹರಿಯುವ ಮನಸ್ಸಾಗಲಿಲ್ಲ. ಅದನ್ನು ಬ್ಯಾಗಲ್ಲಿ ಭದ್ರವಾಗಿಟ್ಟು ಮನೆಗೆ ಓಡಿದೆ. ಎಂದೂ ಇಲ್ಲದಂತೆ ನನ್ನ ಹೃದಯ ಡವಡವಗುಟ್ಟತೊಡಗಿತ್ತು. ಕೋಣೆ ಸೇರಿಕೊಂಡು ಬಾಗಿಲು ಮುಚ್ಚಿ ಪತ್ರ ಓದತೊಡಗಿದೆ. ಅದರಲ್ಲಿರುವುದು ಕೇವಲ ಅಕ್ಷರಗಳಲ್ಲ, ನಿನ್ನ ಹೃದಯದ ತುಣುಕುಗಳು ಅನಿಸಿತು. ನಾನೀಗ ನಿನ್ನ ಪ್ರೀತಿಗೆ ಶರಣಾಗಿದ್ದೇನೆ. ನಿನ್ನ ಪ್ರೀತಿಯನ್ನು ತಿರಸ್ಕರಿಸುವಷ್ಟು ದಡ್ಡಿ ನಾನಲ್ಲ.
ಲವ್ ಲೆಟರ್ ಬರೆಯುವುದು ಹೇಗೆಂದು ನನಗೆ ಗೊತ್ತಿಲ್ಲ. ಆದರೆ ಇಷ್ಟನ್ನು ಬರೆಯದಿರಲು ನನಗೆ ಆಗಲಿಲ್ಲ. ನಾಳೆ ಕಾಲೇಜಿನ ಗುಲ…ಮೊಹರ್ ಮರದ ಬಳಿ ಕಾಯುತ್ತಿರು. ನೀನು ಹೇಳಿದಂತೆ, ನಿನ್ನನ್ನು ಪ್ರೀತಿಸುವ ಕುರುಹಾಗಿ ಗುಲಾಬಿ ಬಣ್ಣದ ಡ್ರೆಸ್ ಧರಿಸಿ ಬರುತ್ತೇನೆ!
ಇಂತಿ ನಿನ್ನ ಪಾರೂ..
ಜೆಸ್ಸಿ ಪಿ.ವಿ ಪುತ್ತೂರು