ನನ್ನ ಹೆಸರು ಕಂಡ ಕೂಡಲೇ, ಪತ್ರವನ್ನು ಸಂಪೂರ್ಣ ಓದದೆ ಹರಿದು ಹಾಕಿ ಬಿಡುತ್ತೀಯೇನೋ; ಹಾಗೆ ಮಾಡಬೇಡ. ನನ್ನ ಹೃದಯದ ಭಾವನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವೆ ಇಲ್ಲಿ.
ಪತ್ರದ ಆರಂಭದಲ್ಲೇ ವಿನಮ್ರತೆಯಿಂದ ಕೇಳುತ್ತಿರುವೆ, ಕ್ಷಮಿಸಿಬಿಡು ಗೆಳತಿ. ನನ್ನ ಹೆಸರು ಕಂಡ ಕೂಡಲೇ, ಪತ್ರವನ್ನು ಸಂಪೂರ್ಣ ಓದದೆ ಹರಿದು ಹಾಕಿಬಿಡುತ್ತೀಯೇನೋ; ಹಾಗೆ ಮಾಡಬೇಡ. ನನ್ನ ಹೃದಯದ ಭಾವನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವೆ ಇಲ್ಲಿ. ನಿನ್ನ ಅನುಮತಿಯಿಲ್ಲದೆ ನಾನು, ನಿನ್ನ ಹೃದಯವೆಂಬ ಪವಿತ್ರವಾದ ಗರ್ಭಗುಡಿಯಲ್ಲಿ ಲಜ್ಜೆ ಬಿಟ್ಟು ಹೆಜ್ಜೆಯಿಟ್ಟವನು. ಅದಕ್ಕೊಪ್ಪಿ ಮದುವೆಯಾಗೋಣ ಅಂದ ನಿನ್ನ ನಿರ್ಧಾರಕ್ಕೆ ತಣ್ಣೀರೆರಚಿ, ಅತಿಯಾಗಿ ಪ್ರೀತಿಸುತ್ತಿದ್ದ ಜೀವವನ್ನು, ಅಷ್ಟೇ ದ್ವೇಷಿಸುವಂತೆ ಮಾಡಿದ ದುಷ್ಟ. ನನಗೀಗ ಅತಿಯಾದ ಪಾಪ ಪ್ರಜ್ಞೆ ಕಾಡುತ್ತಿದೆ.
ಒಂದು ವಿಷಯ ಸ್ಪಷ್ಟವಾಗಿ ಹೇಳುತ್ತೇನೆ ಕೇಳು. ಅದನ್ನು ನೀನೂ ಒಪ್ಪುತ್ತೀಯಾ ಅನ್ನೋ ನಂಬಿಕೆ ನನಗಿದೆ. ಓದುವ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಅಂತ ಕೂತರೆ ಭವಿಷ್ಯ ಹಾಳಾಗಿ ಬಿಡುತ್ತದೆ. ಅಂದು ನಿನ್ನ ಹಿಂದೆ ಬಿದ್ದು, ನನ್ನನ್ನು ಪ್ರೀತಿಸು ಅಂತ ಅಲೆದಿದ್ದು ನಿಜ. ನೀನೇ ನನ್ನ ಬಾಳಸಂಗಾತಿ ಆಗಬೇಕು ಅನ್ನೋದು ನನ್ನ ಮನದ ಇಂಗಿತ. ಅದು ಈಡೇರಬೇಕಂದ್ರೆ; ನಮ್ಮ ಮನೆಯವರು, ನಿಮ್ಮ ಮನೆಯವರು ಒಪ್ಪಿ, ನಮ್ಮಿಬ್ಬರನ್ನು ಆಶೀರ್ವದಿಸಬೇಕು. ಅದಕ್ಕೆಲ್ಲಾ ಸಮಯ ಬೇಕಲ್ವಾ? ನನಗೂ ಒಳ್ಳೆ ಉದ್ಯೋಗ, ಕೈತುಂಬಾ ಸಂಬಳ, ಸಮಾಜದಲ್ಲಿ ಒಂದು ಸ್ಥಾನ ಬೇಕಲ್ವಾ? ಅದಕ್ಕಾಗಿ ನಿನ್ನಿಂದ ದೂರಾಗಿದ್ದು ಅಷ್ಟೇ, ಬೇರಾವ ಕಾರಣವೂ ಇಲ್ಲ.
ನಾನು ಐಎಎಸ್ ಮಾಡಬೇಕನ್ನೋದು ನನ್ನವ್ವ, ಅಪ್ಪನ ಆಸೆ. ಅದು ನನ್ನಾಸೆ ಕೂಡ. ಹಾಗಾಗಿ ಇನ್ನೊಂದೆರಡು ವರ್ಷ. ನಿನಗಷ್ಟೇ ಅಲ್ಲ. ಯಾರಿಗೂ ನಾನು ಸಿಗಲಾರೆ. ಐಎಎಸ್ ಪರೀಕ್ಷೆಯಲ್ಲಿ ಪಾಸ್ ಆಗ್ತಿನಲ್ಲ; ಅವತ್ತು ನನ್ನ ಕನಸುಗಳಿಗೆ ರೆಕ್ಕೆ ಬರುತ್ತೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಲು ಅದೆಷ್ಟೋ ರಾತ್ರಿ, ಅಮ್ಮ ನೀರು ಕುಡಿದೇ ಹೊಟ್ಟೆ ತುಂಬಿಸಿಕೊಂಡಿದ್ದಾಳೆ. ಅಪ್ಪನ ಬೆನ್ನ ಮೇಲೆ ಮೂಡಿದ ಬಾರುಗಳು, ಅವನು ದಿನಕ್ಕೆ ಎಷ್ಟು ಮೂಟೆ ಹೊರುತ್ತಿದ್ದ ಅನ್ನೋದಕ್ಕೆ ಸಾಕ್ಷಿ. ಇನ್ನು ಮುಂದೆ ಅವರನ್ನು ಚೆನ್ನಾಗಿ ನೋಡಿಕೊಳ್ಳೋ ಜವಾಬ್ದಾರಿ ನನ್ನದು. ಎಲ್ಲದಕ್ಕಿಂತ ಹೆಚ್ಚಾಗಿ, ನನ್ನ ಮಗ ಎಲ್ಲರಂತಲ್ಲ ಅನ್ನೋ ಅಮ್ಮನ ಮಾತು, ನಾನು ಎಡವಿದಾಗಲೆಲ್ಲಾ ನನ್ನನ್ನು ಎಚ್ಚರಿಸುತ್ತಲೇ ಇರುತ್ತೆ!
ಹಾಗಾಗಿ, ನಾನೀಗ ಓದೋ ಹಠಕ್ಕೆ ಬಿದ್ದಿದ್ದೇನೆ. ಎರಡು ವರ್ಷದ ನಂತರ ಕ್ಲಾಸ್ ಒನ್ ಆಫೀಸರ್ ಅನ್ನಿಸಿಕೊಂಡು, ಎದೆಯುಬ್ಬಿಸಿ, ಅಪ್ಪ-ಅವ್ವನೊಟ್ಟಿಗೆ ಶಾಸ್ತ್ರೋಕ್ತವಾಗಿ ಹೆಣ್ಣು ಕೇಳ್ಳೋಕೆ ಬರ್ತೀನಿ. ಅಲ್ಲಿಯವರೆಗೂ ಕಾಯ್ತಿಯಲ್ವಾ? ಖಂಡಿತ ನನಗಾಗಿ ನೀನು ಕಾಯ್ತಿಯ ಅನ್ನೋದು ನನ್ನ ನಂಬಿಕೆ.
ಈಗ ಪತ್ರ ನೋಡಿ ಮುಗುಳ್ನಗ್ತಾ ಇದ್ದೀಯಾ ಅಲ್ವಾ? ಮತ್ತೂಮ್ಮೆ ಭಯ ಭಕ್ತಿಯಿಂದಲೇ ಕೇಳ್ತಿದ್ದೀನಿ, ನನಗಾಗಿ ಕಾಯ್ತಿಯ ಅಲ್ವಾ?
ಇಂತಿ
ನಿನ್ನ ಸೀರಿಯಸ್ ಹುಡುಗ
ಗೌರೀಶ್ ಕಟ್ಟಿಮನಿ