ಪ್ರೀತಿ ಅಂದರೆ ಹೀಗೆಲ್ಲ ಇರುತ್ತೆ ಅಂತ ಗೊತ್ತೇ ಇರಲಿಲ್ಲ ಕಣೋ. ನನ್ನದೇ ಆದ ಲೊಕದಲ್ಲಿ ವಿಹರಿಸುತ್ತಿದ್ದ ನನ್ನನ್ನು ಅದ್ಯಾಕೆ ಮತ್ತು ಹೇಗೆ ಸೆಳೆದೆಯೊ ನಾ ಕಾಣೆ. ಪರಿಚಯವಾದ ಕ್ಷಣದಿಂದ ಮೊನ್ನೆ ಮೊನ್ನೆಯವರೆಗೂ ನನಗೊಬ್ಬಳಿಗೆ ಸ್ವಂತವಾಗಿದ್ದ ನೀನು ಇಂದು ಯಾಕೆ ವಿಚಿತ್ರವಾಗಿ ವರ್ತಿಸುತ್ತಿದ್ದೀ ಎಂದೇ ತಿಳಿಯಿತ್ತಿಲ್ಲ. ನಮ್ಮ ನೈಜ ಪ್ರೇಮದ ಮೇಲೆ ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ. ದಿನಂಪ್ರತಿ ಗಲಾಟೆ, ಕಣ್ಣೀರ ನಡುವೆ ನಾನು ನಿನ್ನನ್ನು ದೂರ ಮಾಡಬೇಕಾಯಿತು. ಪ್ರತಿ ದಿನ ಮಾತಿನ ಮೂಲಕ ನಮ್ಮದೇ ಆದ ಪ್ರಪಂಚಕ್ಕೆ ಹೋಗಿಬರುತ್ತಿದ್ದವರು ನಾವು. ನನ್ನ ನಿನ್ನ ಪ್ರೀತಿ ಇಷ್ಟು ಬೇಗ ಮುಗಿದು ಹೋಗುತ್ತದೆ ಎಂದು ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ. ಏಕೆಂದರೆ, ನನ್ನ ನಿನ್ನ ನಡುವೆ ಅದೆಂತ ಗಲಾಟೆ ಆದರೂ ಹೊಂದಾಣಿಕೆಯಲ್ಲಿ ಬಿರುಕು ಬಿಟ್ಟಿರಲಿಲ್ಲ. ಅದೇನೇ ಮುನಿಸಿಕೊಂಡರೂ ನನ್ನಲ್ಲಿ ಕ್ಷಮೆ ಕೇಳುತ್ತಿದ್ದ ನೀನು, ಇಂದು ವ್ಯಾಘ್ರನಂತೆ ಉಗ್ರವಾಗಿ ವರ್ತಿಸುತ್ತಿದ್ದೀಯಾ.
ಈ ರೀತಿಯ ನಿನ್ನ ಒರಟು ವರ್ತನೆ ನನಗೆ ತುಂಬಾ ಹೊಸದು. ಆದರೂ, ಬೇಜಾರಿಲ್ಲ. ಆದರೆ, ಒಂದಂತೂ ಸತ್ಯ ಗೆಳೆಯ. ನನ್ನ ಲೈಫಲ್ಲಿ ಪ್ರೀತಿಯ ಹೊಸ ಪ್ರಯೋಗ ಮಾಡಿದ ಮೊದಲಿಗನೂ, ಕೊನೆಯವನೂ ನೀನೇ. ಪ್ರೀತಿ ಎಂದರೆ, ಆಕರ್ಷಣೆ ಎಂಬ ಅಸ್ತ್ರದಿಂದ ಇದ್ದಬದ್ದವರಲ್ಲಿ ಆಗುವುದಲ್ಲ. ಭಾವ ಮಂದಿರದಲ್ಲಿ ಪೂಜಿಸುತ್ತಾ ಪ್ರೇಮ ಪಾವಿತ್ರ್ಯತೆಗೆ ಬೆಲೆ ಕೊಟ್ಟು ನೀ ನನಗೆ ಒಲಿಯಬಹುದೇನೋ ಎಂದು ಕಾಯುತ್ತಿರುವ ಭಕ್ತೆ ನಾನು. ಪ್ರೀತಿ ಎಂಬ ಪ್ರಪಂಚದಲ್ಲಿ ತಾಯಿಯ ಮಮತೆ, ತಂದೆಯ ಕಾಳಜಿ, ಅಕ್ಕನ ಆಸರೆ ತೋರಿಸಿದವನು ನೀನು. ಅದೇನೇ ಆದರೂ, ನಿನ್ನ ಈ ದಿಢೀರ್ ಅಗಲುವಿಕೆಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನೀನು ನೆನಪಾದಾಗಲೆಲ್ಲಾ ಅತ್ತು ಸಮಾಧಾನಿಸಿಕೊಳ್ಳುತ್ತೇನೆ.
ನೆನಪುಗಳ ಸಾಗರದಲ್ಲಿ ಈಜೋ ಮೀನಾಗುವೆ, ನಂಬಿಕೆಯ ಕಲ್ಪವೃಕ್ಷವೂ ಆಗಬಲ್ಲೆ. ಆದರೆ, ಧುಮುಕಿ ಬರುವ ನಿನ್ನ ನೆನಪುಗಳನ್ನು ಹಿಡಿದಿಟ್ಟುಕೊಳ್ಳುವಷ್ಟು ಶಕ್ತಿ ನನಗಿಲ್ಲ. ನನ್ನ ಬಿಟ್ಟು ಹೋಗಲು ತುದಿಗಾಲಲ್ಲಿ ನಿಂತಿರುವ ನಿನ್ನಲ್ಲಿ ಒಂದೇ ಒಂದು ವಿನಮ್ರ ಕೋರಿಕೆ. ನನ್ನ ಒಂದೇ ಒಂದು ಸಲ ನಿನ್ನ ಮಡಿಲಲ್ಲಿ ಮಲಗಿಸಿಕೊಳ್ತೀಯಾ? ಅಮ್ಮನ ಪ್ರೀತಿಯ ಜಗ ತೋರಿಸಿದ ಸುಂದರ ಸ್ವರ್ಗ ಅದು. ಅಲ್ಲಿ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರ ಬತ್ತಿಸುವಾಸೆ.
ಇಂತಿ ನಿನ್ನ ಗುಬ್ಬಿ ಮರಿ
ಅರ್ಪಿತಾ ಕುಂದರ್