ಉಡುಪಿ: ಮಾಹಿತಿ ಹಕ್ಕು ನಿಯಮದಡಿಯಲ್ಲಿ ಮಾಹಿತಿ ಕೋರಿ ಸಲ್ಲಿಸುವ ಅರ್ಜಿದಾರರಿಗೆ ಅಧಿಕಾರಿಗಳು ಸಕಾಲದಲ್ಲಿ ತಮ್ಮಲ್ಲಿರುವ ಮಾಹಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತ ಕೆ.ಎಂ. ಚಂದ್ರೇಗೌಡ ಹೇಳಿದ್ದಾರೆ.
ಬುಧವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಮಾಹಿತಿ ಆಯೋಗದಲ್ಲಿ ದಾಖಲಾಗಿರುವ ಪ್ರಕರಣಗಳ ವಿಚಾರಣೆ ಹಾಗೂ ಮಾಹಿತಿ ಹಕ್ಕು ಅಧಿ ನಿಯಮ 2005ರ ಕಾಯ್ದೆಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಮಾಹಿತಿ ಇಲ್ಲವಾದಲ್ಲಿ ಸಂಬಂಧಪಟ್ಟ ಇತರೆ ಪ್ರಾಧಿಕಾರಕ್ಕೆ ಕಾಲ ಮಿತಿಯೊಳಗೆ ವರ್ಗಾಯಿಸಬೇಕು. ಅನಗತ್ಯ ವಿಳಂಬ ಮಾಡಬಾರದು ಎಂದರು.
ಮಾಹಿತಿ ಹಕ್ಕು ಅಧಿ ನಿಯಮ 2005ರ ಕಾಯಿದೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಅಗತ್ಯ ಮಾಹಿತಿ, ಸಲಹೆ ಸೂಚನೆಗಳು ಆಯುಕ್ತರು ನೀಡಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಮಾತನಾಡಿ ಒಂದು ವಾರದೊಳಗೆ ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಮಾಹಿತಿ ಹಕ್ಕು ನಿಯಮದ ಕುರಿತು ವಿವರಗಳನ್ನು ಕಚೇರಿಯ ಸೂಚನಾ ಫಲಕದಲ್ಲಿ ಅಳವಡಿಸಬೇಕು. ಅರ್ಜಿಗಳನ್ನು ಸ್ವೀಕರಿಸಲು ಪ್ರತ್ಯೇಕ ರಿಜಿಸ್ಟರ್‌ಗಳನ್ನಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಬೇಕೆಂದು ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಅನುರಾಧಾ ಸ್ವಾಗತಿಸಿ, ವಂದಿಸಿದರು.
31 ಪ್ರಕರಣ ದಾಖಲು
ರಾಜ್ಯ ಮಾಹಿತಿ ಆಯೋಗದಲ್ಲಿ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ 71 ಪ್ರಕರಣಗಳು ವಿಚಾರಣೆಗೆ ದಾಖಲಾಗಿದ್ದು ಅದರಲ್ಲಿ 50ಕ್ಕೂ ಹೆಚ್ಚು ಅರ್ಜಿಗಳನ್ನು ಅರ್ಜಿದಾರರ ಸಮ್ಮುಖದಲ್ಲೇ ಇತ್ಯರ್ಥಪಡಿಸಲಾಯಿತು. ಉಳಿದ ಪ್ರಕರಣಗಳ ವಿಚಾರಣೆಗೆ ಮುಂದಿನ ದಿನಾಂಕ ನಿಗದಿ ಮಾಡಲಾಯಿತು.