Advertisement
1.ನಿಮಗೆ ಇಲ್ಲಿ ಪುಸ್ತಕ ಓದುವ ಅನುಭವ ಸಿಗುತ್ತದೆ.2.ಕನ್ನಡದ ಸೊಗಡಿರುವ ಮಧುರವಾದ ಹಾಡುಗಳಿವೆ.
3. ಬದುಕಲ್ಲಿ ಕಾಣಿಸುವ ಅಂಶಗಳನ್ನು ತೆರೆಮೇಲೆ ನೋಡಬಹುದು.
4. ಯೋಚನೆಗೆ ಹಚ್ಚುವ, ನಿಮ್ಮನ್ನು ಕಾಡುವ ವಿಷಯಗಳಿವೆ.
5. ಒಳ್ಳೆಯ ತಾರಾಗಣವಿದೆ. ಸೊಗಸಾದ ಅಭಿನಯ ನೋಡಬಹುದು.
Related Articles
Advertisement
ಸಿನಿಮಾ ನೋಡಿದವರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆಯಂತೆ. “ಸಿಡ್ನಿಯಲ್ಲಿ ಸಿನಿಮಾ ಪ್ರದರ್ಶನವಾಗಿದೆ. ಸಿನಿಮಾ ನೋಡಿದವರು ಫೋನ್ ಮಾಡುತ್ತಿದ್ದಾರೆ, ಸಿನಿಮಾ ನೋಡಿ ಹೊರಬಂದಾಗ ತುಂಬಾ ಕಾಡುತ್ತೆ, ನಮ್ಮನ್ನು ಚಿಂತನೆಗೆ ಹಚ್ಚುತ್ತೆ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ. ಸಹಜವಾಗಿಯೇ ಸಿನಿಮಾದ ಬಗ್ಗೆ ವಿಶ್ವಾಸವಿದೆ’ ಎನ್ನುವುದು ಪದಕಿ ಮಾತು. ಚಿತ್ರದ ಟೈಟಲ್ “ದಯವಿಟ್ಟು ಗಮನಿಸಿ’. ಕಥೆಗೂ ಟೈಟಲ್‌ಗೂ ಏನು ಸಂಬಂಧ ಎಂದರೆ, ದೊಡ್ಡ ಸಂಬಂಧವಿದೆ ಎನ್ನುತ್ತಾರೆ.
“ಸಾಮಾನ್ಯವಾಗಿ ರೈಲ್ವೇ ಸ್ಟೇಶನ್, ಬಸ್ ಸ್ಟೇಶನ್ ಅಥವಾ ತುಂಬಾ ಜನ ಸೇರುವ ಜಾಗದಲ್ಲಿ ಯಾವುದೇ ಅನೌನ್ಸ್‌ಮೆಂಟ್ ಆಗಲೀ, ಮೊದಲಿಗೆ ಆರಂಭವಾಗೋದು “ದಯವಿಟ್ಟು ಗಮನಿಸಿ …’ ಎಂದು. ಇಲ್ಲೂ ಅಷ್ಟೇ ಜೀವನದಲ್ಲಿ ನಮಗೆ ಗೊತ್ತಿರದಂತಹ, ನಮ್ಮ ಗಮನಕ್ಕೆ ಬಾರದಂತಹ ಅಂಶಗಳನ್ನು ಗಮನಿಸಿ ಎಂಬುದನ್ನು ಹೇಳುತ್ತಿದ್ದೇವೆ. ಹಾಗಾಗಿ, ಟೈಟಲ್ ಕೂಡಾ ಸೂಕ್ತವಾಗುತ್ತದೆ’ ಎನ್ನುತ್ತಾರೆ. ಚಿತ್ರ ನಾಲ್ಕು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆ. ಒಂದು ಕಥೆ, ಮೂರು ಉಪಕಥೆ.
ಇಲ್ಲಿ ಮೂರು ಕಥೆಗಳನ್ನು ರೋಹಿತ್ ಪದಕಿ ಬರೆದಿದ್ದರೆ, ಇನ್ನೊಂದು ಜಯಂತ್ ಕಾಯ್ಕಿಣಿಯವರ ಕಥೆಯನ್ನು ಬಳಸಿಕೊಂಡಿದ್ದಾರೆ. ಜಯಂತ್ ಕಾಯ್ಕಿಣಿ ಅವರ “ತೂಫಾನ್ ಮೇಲ್’ ಪುಸ್ತಕದ ಸಣ್ಣ ಕಥೆಯೊಂದು ನಿರ್ದೇಶಕ ರೋಹಿತ್ ಪದಕಿ ಅವರಿಗೆ ಇಷ್ಟವಾಗಿದೆ. “ಕನ್ನಡಿ ಇಲ್ಲದ ಊರಲ್ಲಿ’ ಎಂಬ ಉಪಕಥೆಯ ಒನ್‌ಲೈನ್ ಇಟ್ಟುಕೊಂಡು ಚಿತ್ರೀಕರಿಸಿದ್ದಾರಂತೆ ರೋಹಿತ್ ಪದಕಿ. ಚಿತ್ರ ನಾಲ್ಕು ಟ್ರ್ಯಾಕ್‌ಗಳಲ್ಲಿ ಸಾಗಿದರೂ ಅಂತಿಮವಾಗಿ ಎಲ್ಲಾ ಪಾತ್ರಗಳು ಮುಖಾಮುಖೀಯಾಗುತ್ತವೆ.
ಅದಕ್ಕೊಂದು ಕಾರಣವಿದೆ ಎನ್ನುತ್ತಾರೆ ಪದಕಿ. ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ರಘು ಮುಖರ್ಜಿ, ರಾಜೇಶ್ ನಟರಂಗ, ಸಂಯುಕ್ತಾ ಹೊರನಾಡು, ವಸಿಷ್ಠ, ಸಂಗೀತಾ ಭಟ್, ಸುಕೃತಾ ವಾಗ್ಲೆ, ಪೂರ್ಣಚಂದ್ರ ಮೈಸೂರು, ಅವಿನಾಶ್, ಪ್ರಕಾಶ್ ಬೆಳವಾಡಿ ಸೇರಿದಂತೆತ ಅನೇಕರು ನಟಿಸಿದ್ದಾರೆ. ಒಂದೊಂದೇ ಟ್ರ್ಯಾಕ್‌ಗಳನ್ನು ಚಿತ್ರೀಕರಿಸುತ್ತಿದ್ದರಿಂದ ದೊಡ್ಡ ತಾರಾಬಳಗವನ್ನು ನಿಭಾಹಿಸೋದು ಕಷ್ಟವಾಗಲಿಲ್ಲ ಎನ್ನುತ್ತಾರೆ.
ಚಿತ್ರದ ಕಥೆ ಹಾಗೂ ಅದರ ಪೋಷಣೆ ಹೊಸ ತರಹದಿಂದ ಕೂಡಿರುವುದರಿಂದ ಜನ ಈ ಸಿನಿಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ರೋಹಿತ್ ಪದಕಿಗಿದೆ. “ಇತ್ತೀಚೆಗೆ “ಆಟಗಾರ’ ಸೇರಿದಂತೆ ಒಂದಷ್ಟು ವಿಭಿನ್ನ ಸಿನಿಮಾಗಳನ್ನು ಜನ ಸ್ವೀಕರಿಸಿದ್ದಾರೆ. ಒಂದು ಸಾರಿ, ಸಿನಿಮಾ ಚೆನ್ನಾಗಿದೆ ಎಂಬುದು ಗೊತ್ತಾದರೆ, ಜನ ಆ ಸಿನಿಮಾಗಳನ್ನು ಕೈ ಬಿಡೋದಿಲ್ಲ. ನಮಗೂ ಅದೇ ವಿಶ್ವಾಸವಿದೆ’ ಎನ್ನುವುದು ರೋಹಿತ್ ಪದಕಿ ಮಾತು.