ಮೈಸೂರು: ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ಇಂಧನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಯುವವಿಜ್ಞಾನಿಗಳು ನೀರಿನಿಂದ ಪೆಟ್ರೋಲಿಯಂ ತಯಾರಿಕೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಇಸ್ರೋ ವಿಜ್ಞಾನಿ ಡಾ.ಬಿ.ಎನ್.ಸುರೇಶ್ ಹೇಳಿದರು. ಮೈಸೂರು ಸೈನ್ಸ್ ಫೌಂಡೇಷನ್‌ನ ಸಂಸ್ಥಾಪನಾ ದಿನಾಚರಣೆ ಹಾಗೂ 51ನೇ ತಿಂಗಳ ವಿಜ್ಞಾನ ಉಪನ್ಯಾಸ ಮಾಲಿಕೆಯಲ್ಲಿ ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದರು.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದಂತೆ 2022ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಲಿದೆ. ಇದಕ್ಕೆ ಪೂರಕವಾದ ವಿಜ್ಞಾನ, ತಂತ್ರಜ್ಞಾನ ಹಾಗೂ ಮಾನವ ಸಂಪನ್ಮೂಲ ನಮ್ಮಲ್ಲಿದ್ದು, ಪ್ರಸ್ತುತ ಭಾರತ ಸಹ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ಹಿಂದೆ ಕೃಷಿ ಪ್ರಧಾನ ರಾಷ್ಟ್ರವಾಗಿದ್ದ ಭಾರತ, ಇಂದು ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನ, ಕೈಗಾರಿಕಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡುವ ಮೂಲಕ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ ಎಂದರು.
ಆದರೆ ಯಾವುದೇ ದೇಶದ ಅಭಿವೃದ್ಧಿಯಲ್ಲಿ ಸ್ವಾಭಾವಿಕವಾಗಿ ಆ ದೇಶದ ಸಂಪನ್ಮೂಲ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಲಿದ್ದು, ದೇಶ ಬೆಳೆದಂತೆ ಅಲ್ಲಿನ ಸಂಪನ್ಮೂಲವೂ ಹೆಚ್ಚಾಗಲಿದೆ. ಪ್ರಸ್ತುತ ಸಂದರ್ಭದಲ್ಲಿ ಇಂಧನ ಮತ್ತು ಶಕ್ತಿ ಕೊರತೆ ಎದುರಿಸುವ ಭಾರತ ಸೌರಶಕ್ತಿ ಬಳಕೆಗೆ ಮುಂದಾಗಿದೆ. ಆದರೆ ಇಂಧನ ಶಕ್ತಿ ಉತ್ಪಾದಿಸುವ ಪರ್ಯಾಯ ಶಕ್ತಿಯಿಂದ ಪರಿಸರಕ್ಕೆ ತೊಂದರೆಯಾಗಲಿದ್ದು, ಈ ನಿಟ್ಟಿನಲ್ಲಿ ಯುವ ವಿಜ್ಞಾನಿಗಳು ನೀರಿನಿಂದ ಪೆಟ್ರೋಲಿಯಂ ತಯಾರಿಕೆಯ ಬಗ್ಗೆ ಗಮನ ಹರಿಸಬೇಕಿದ್ದು, ಇದರಿಂದ ದೇಶದ ಇಂಧನ ಸಮಸ್ಯೆ ಬಗೆಹರಿಸಬಹುದು ಎಂದು ಹೇಳಿದರು.
ವೈಜ್ಞಾನಿಕ ಪರಿಹಾರ ಹುಡುಕಿ: ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ಜಲವಿವಾದ ನಡೆಯುತ್ತಲೇ ಇದೆ. ಕರ್ನಾಟಕದಲ್ಲಿ ಬೆಳೆಯುವ ಕಬ್ಬು ಹಾಗೂ ತಮಿಳುನಾಡಿನಲ್ಲಿ ಬೆಳೆಯುವ ಭತ್ತದ ಬೆಳೆಗೆ ನೀರಿನ ಅವಶ್ಯಕತೆ ಇದೆ. ಈ ಹಿನ್ನೆಲೆ ಭೌಗೋಳಿಕ ಸಂಶೋಧನೆ ನಡೆಸಿ ಯಾರು ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು ಹಾಗೂ ನೀರನ್ನು ಯಾವ ರೀತಿಯಲ್ಲಿ ಹಂಚಿಕೆ ಮಾಡಬೇಕೆಂದು ಚರ್ಚಿಸಿ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಇಸ್ರೋ ನಿವೃತ್ತ ವಿಜ್ಞಾನಿ ಸಿ.ಡಿ.ಪ್ರಸಾದ್ ಅವರಿಗೆ ಜಿ.ಎಸ್.ಬಸವರಾಪ್ಪ ಉತ್ತಮ ವಿಜ್ಞಾನ ಸಂವಹನಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಂಟಿ ಸಾರಿಗೆ ಆಯುಕ್ತ ಡಾ.ಸಿ.ಟಿ. ಮೂರ್ತಿ, ಸಿಎಸ್‌ಆರ್‌ಟಿಐ ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಸೇರಿದಂತೆ ನಗರದ 30ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಂದ ಆಗಮಿಸಿದ್ದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.