Advertisement

ನಮ್ಮನ್ನು ಗಮನಿಸಿ ಪ್ಲೀಸ್‌

10:25 AM Oct 25, 2017 | Team Udayavani |

ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಅನ್ಯಾಯ ಆಗುತ್ತಿದೆ ಎಂಬ ಕೂಗು ನಿನ್ನೆ ಮೊನ್ನೆಯದ್ದಲ್ಲ. ಅದು ಪ್ರತಿ ಬಾರಿಯೂ ಕೇಳಿಬರುತ್ತಿವ ಆರೋಪ. ಮೊನ್ನೆಯಷ್ಟೇ “ಸತ್ಯ ಹರಿಶ್ಚಂದ್ರ’ ಚಿತ್ರಕ್ಕೆ ಅನ್ಯಾಯ ಆಗಿದೆ ಅಂತ ನಿರ್ಮಾಪಕ ಕೆ.ಮಂಜು ಗರಂ ಆಗಿ ಆರೋಪಿಸಿದ್ದರು. ಈಗ “ದಯವಿಟ್ಟು ಗಮನಿಸಿ’ ಚಿತ್ರತಂಡದ ಸರದಿ. ಹೌದು, “ದಯವಿಟ್ಟು ಗಮನಿಸಿ’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್‌ನಲ್ಲಿ ಅನ್ಯಾಯವಾಗಿದೆ. ಈ ಬಗ್ಗೆ ನಿರ್ಮಾಪಕ ಕೃಷ್ಣ ಸಾರ್ಥಕ್‌ ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement

“ಚಿತ್ರ ಕುರಿತು ಒಳ್ಳೆಯ ವಿಮರ್ಶೆ ಬಂದಿದೆ, ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿದೆ. ಆದರೆ, ನೋಡುಗರಿಗೆ ಸರಿಯಾದ ವೇಳೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡದೆ, ಬೇಕಾಬಿಟ್ಟಿ ಪ್ರದರ್ಶನದ ವೇಳೆ ಕೊಟ್ಟು, ಒಳ್ಳೆಯ ಸಿನಿಮಾಗೆ ಅನ್ಯಾಯ ಮಾಡಲಾಗುತ್ತಿದೆ. ಜನರು ಬರುತ್ತಿದ್ದಾರೆ. ಆದರೆ, ಪ್ರದರ್ಶನ ಇಲ್ಲ. ನನಗೆ ಈಗಷ್ಟೇ ಹಣ ಬರೋಕೆ ಶುರುವಾಗಿದೆ. ಕನ್ನಡ ಸಿನಿಮಾಗಳಿಗೇ ಇಲ್ಲಿ ಬೆಲೆ ಇಲ್ಲವೆಂದಮೇಲೆ ನಮ್ಮಂತಹ ಹೊಸಬರು ಯಾಕೆ ಸಿನಿಮಾ ನಿರ್ಮಾಣ ಮಾಡಬೇಕು?

ಈ ರೀತಿಯ ಸಿನಿಮಾ ಮಾಡೋದು ಸುಲಭವಲ್ಲ. ಹೇಗೋ ಕಷ್ಟಪಟ್ಟು ವರ್ಷಗಟ್ಟಲೆ ಸಿನಿಮಾ ಮಾಡಿ, ಅದನ್ನು ಜನರು ಒಪ್ಪಿಕೊಂಡಿದ್ದರೂ, ಮಲ್ಟಿಪ್ಲೆಕ್ಸ್‌ನಲ್ಲಿ ಯಾವುದೋ ಸಮಯ ನಿಗದಿಪಡಿಸಿ ಪ್ರದರ್ಶನಕ್ಕೆ ಅವಕಾಶ ಕೊಟ್ಟರೆ, ಜನರು ಮಧ್ಯರಾತ್ರಿ ಬಂದು ಸಿನಿಮಾ ನೋಡೋಕ್ಕಾಗುತ್ತಾ? ಪರಭಾಷೆ ಚಿತ್ರಗಳಿಗೆ ಮಣೆ ಹಾಕುವ ಮಲ್ಪಿಪ್ಲೆಕ್ಸ್‌ ಕನ್ನಡ ಚಿತ್ರಗಳೆಂದರೆ ಕೇವಲವಾಗಿ ನೋಡುತ್ತಾರೆ.

ಒಳ್ಳೆಯ ಚಿತ್ರ ಮಾಡಿರುವ ತೃಪ್ತಿ ನನಗಿದೆ. ಆದರೆ, ಅದನ್ನು ಜನರಿಗೆ ತಲುಪಿಸುವ ಅವಕಾಶ ಕೊಡುತ್ತಿಲ್ಲ. ವಿದೇಶದಿಂದ ಚಿತ್ರಕ್ಕೆ ಬೇಡಿಕೆ ಇದೆ. ಆದರೆ, ಇಲ್ಲೇ ಕಡೆಗಣಿಸಲಾಗುತ್ತಿದೆ. ಚಿತ್ರರಂಗಕ್ಕೆ ಹೊಸಬರು ಸಿನಿಮಾ ಮಾಡೋಕೆ ಬಂದಿದ್ದಾರೆ. ಜನ ಒಪ್ಪುವ ಚಿತ್ರ ಕೊಟ್ಟಿದ್ದಾರೆ. ಅಂತಹವರನ್ನು ಪ್ರೋತ್ಸಾಹಿಸುವ ಕೆಲಸ ಇಲ್ಲಾಗುತ್ತಿಲ್ಲ’ ಎಂದು ಬೇಸರ ಹೊರಹಾಕಿದರು ಕೃಷ್ಣ ಸಾರ್ಥಕ್‌.

ನಿರ್ದೇಶಕ ರೋಹಿತ್‌ ಪದಕಿ ಅವರು ಕೂಡ ನಿರ್ಮಾಪಕರಿಗೆ ದನಿಗೂಡಿಸಿದರು. “ಹೊಸತೇನನ್ನೋ ಮಾಡಿದರೆ, ಇಲ್ಲಿ ಸರಿಯಾಗಿ ಸಹಕಾರ ಸಿಗುತ್ತಿಲ್ಲವೆಂದಮೇಲೆ, ನಾನು ಇನ್ನು ಮುಂದೆ ಕನ್ನಡ ಸಿನಿಮಾ ಮಾಡಬೇಕಾ? ಎಂಬ ಪ್ರಶ್ನೆ ಕಾಡುತ್ತಿದೆ. ಬಹುಶಃ, ನಮಗೆ ಪ್ರೋತ್ಸಾಹ ಸಿಗಲಿಲ್ಲವೆಂದರೆ, ಕನ್ನಡದಲ್ಲಿ ನನ್ನದು ಇದೇ ಕೊನೆಯ ಚಿತ್ರ ಆಗಲಿದೆ. ಹಾಗಂತ ನಮಗೆ ಸಿಂಪತಿ ಬೇಡ.

Advertisement

ಜನರಿಂದ ಒಳ್ಳೆಯ ಸಿನಿಮಾ ಎಂಬ ಮಾತು ಕೇಳಿ ಬಂದಿದೆ. ಪ್ರದರ್ಶನಕ್ಕೆ ಅವಕಾಶ ಕೊಡಿ ಅಷ್ಟೇ. ಸೆನ್ಸಾರ್‌ ಮಂಡಳಿ ಕೂಡ ಸಿನಿಮಾಗೆ “ಎ’ ಪ್ರಮಾಣ ಪತ್ರ ಕೊಟ್ಟಿತು. ಯಾಕೆ ಅಂತ ಗೊತ್ತಿಲ್ಲ. ಕೆಲವೆಡೆ ಕೆಲ ಡೈಲಾಗ್‌ ಬಿಟ್ಟರೆ ಬೇರೇನೂ ಇಲ್ಲ. ಎಲ್ಲೂ ಅಶ್ಲೀಲತೆ ಇಲ್ಲ. ಸಿನಿಮಾ ನೋಡಲು ಮಕ್ಕಳನ್ನು ಕರೆದುಕೊಂಡು ಬಂದವರಿಗೆ ಮಕ್ಕಳಿಗೆ ಟಿಕೆಟ್‌ ಕೊಡದ ಕಾರಣ, ಚಿತ್ರ ನೋಡದೆ ಹಿಂದೆ ಹೋಗಿರುವ ಜನರಿದ್ದಾರೆ.

ಬೇರೆಯವರ ಸಿನಿಮಾಗೆ ತೊಂದರೆ ಆದಾಗ, ನಾವು ಬೆಂಬಲ ವ್ಯಕ್ತಪಡಿಸಿದ್ದೇವೆ. ಆದರೆ, ನಮ್ಮ ಸಿನಿಮಾಗೆ ಸಮಸ್ಯೆಯಾದರೂ ಯಾರೂ ಒಂದಾಗುತ್ತಿಲ್ಲ. ಒಳ್ಳೆಯ ವೇಳೆಗೆ ಪ್ರದರ್ಶನಕ್ಕೆ ಅವಕಾಶ ಕೊಟ್ಟರೆ, ನಿರ್ಮಾಪಕರಿಗೆ ಹಾಕಿದ ಹಣ ಬರುತ್ತೆ. ಈ ವಾರ ಉತ್ತಮ ವರದಿ ಬಂದಿದೆ. ಮುಂದಿನ ವಾರವೂ ಬರುತ್ತೆ. ಆದರೆ, ಪ್ರದರ್ಶನವೇ ಇಲ್ಲವೆಂದರೆ ಹೇಗೆ’ ಎಂದು ಬೇಸರದಿಂದಲೇ ಪ್ರಶ್ನಿಸುತ್ತಾರೆ ಪದಕಿ.

Advertisement

Udayavani is now on Telegram. Click here to join our channel and stay updated with the latest news.

Next