ಯಾಕೋ ಹೀಗೆ ಮಾಡ್ತಿದ್ದೀಯಾ? ನಾನೇನು ತಪ್ಪು ಮಾಡಿದೆ ಹೇಳು? ಯಾಕೆ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಲೇ ಇಲ್ಲ? ನಾನಾಗಿಯೇ ಮೆಸೇಜ್ ಮಾಡಿ ನೆನಪಿಸಿದರೂ ನಿನ್ನಿಂದ ಮರು ಉತ್ತರವಿಲ್ಲ, ಯಾಕೆ? ತುಂಬಾ ನೋವಾಗುತ್ತಿದೆ. ನನ್ನಿಂದ ಏನಾದರೂ ಬೇಜಾರಾಗಿದ್ದರೆ ಕ್ಷಮಿಸು. ತುಂಬಾ ನೆನಪಾಗ್ತಿದ್ದೀಯ, ಒಂದೇ ಒಂದು ಬಾರಿ ನನ್ನೊಡನೆ ಮಾತಾಡು.
ನೀನು ಫೋನ್ ಮಾಡಿದಾಗೆಲ್ಲಾ, ಕೆಲಸ ಇದೆ, ಅಪ್ಪ ಬಂದರು, ಅಮ್ಮ ಬಂದರು ಅಂತೆಲ್ಲಾ ಹೇಳಿ ಕಾಲ್ ಕಟ್ ಮಾಡಿ ಬಿಡುತ್ತಿದ್ದೆ. ಆಗ ನಿನಗೂ ಇಷ್ಟೇ ಬೇಜಾರಾಗುತ್ತಿತ್ತೇನೋ, ಅಲ್ವಾ? ವರ್ಷಾನುಗಟ್ಟಲೆ ಕಾಯಿಸಿದ ಮೇಲೇ ನಾನು ನಿನ್ನನ್ನು ಒಪ್ಪಿಕೊಂಡಿದ್ದು, ಆದರೂ ನೀನು ನನಗಾಗಿ ಕಾದೆ. ನನಗೀಗ ಅರ್ಥ ಆಗ್ತಾ ಇದೆ, ಕಾಯುವುದು ಎಷ್ಟು ಕಷ್ಟ ಅಂತ. ನಾನು ನಿನ್ನನ್ನ ತುಂಬಾ ಸತಾಯಿಸಿದೆ, ಕಾಯಿಸಿದೆ. ಆದರೂ ನೀನು ಕೋಪ ಮಾಡಿಕೊಳ್ಳುತ್ತಿರಲಿಲ್ಲ. ಅದೇ ನೀನೇನಾದ್ರೂ ನನ್ನ ಮೆಸೇಜ್‌ಗೆ ತಕ್ಷಣ ಉತ್ತರ ನೀಡದಿದ್ರೆ, ನಾನು ಕೆರಳಿ ಕೆಂಡವಾಗುತ್ತಿದ್ದೆ. ಮೊದಲು ನೀನೇ ಹಿಂದೆ ಬಂದಿದ್ದು ಅನ್ನೋ ದರ್ಪದಲ್ಲಿ ನಿನ್ನನ್ನು ನೋಯಿಸುತ್ತಿದ್ದೆ. ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದ ನಿನ್ನ ದೊಡ್ಡ ಗುಡ ನನಗೆ ಅರ್ಥವಾಗಿರಲೇ ಇಲ್ಲ. ಆದರೀಗ ಎಲ್ಲವೂ ಗೊತ್ತಾಗುತ್ತಿದೆ.
ತಾಳ್ಮೆಯ ಸಾಕಾರಮೂರ್ತಿಯಂತಿದ್ದ ನೀನು ಈಗ್ಯಾಕೆ ಹೀಗೆ ಮಾಡುತ್ತಿದ್ದೀಯ? ನನ್ನ ಹಳೆಯ ತಪ್ಪುಗಳಿಗೆ ಈಗ ಶಿಕ್ಷೆ ಕೊಡಬೇಕು ಅಂತಿದ್ದೀಯ? ನಿನಗೆ ತುಂಬಾ ಕೆಲಸ ಇದ್ದರೆ ಚೂರು ಬಿಡುವು ಮಾಡಿಕೊಂಡು ಫೋನ್ ಮಾಡು. ಒಂದು ಮೆಸೇಜ್ ಮಾಡಿದರೂ ಸಾಕು. ಮೌನವಾಗಿದ್ದು ಹೀಗೆ ಸತಾಯಿಸಬೇಡ. ನನ್ನ ವರ್ತನೆಯಿಂದ ಬೇಸರವಾಗಿದ್ದರೆ, ಖಂಡಿತಾ ನಾನು ಬದಲಾಗುತ್ತೇನೆ. ಇನ್ಮುಂದೆ ಹಠ-ಕೋಪ ಕಡಿಮೆ ಮಾಡಿಕೊಳ್ಳುತ್ತೇನೆ, ಪ್ರಾಮಿಸ್! ದಯವಿಟ್ಟು ನನ್ನನ್ನು ದೂರ ಮಾಡಬೇಡ.
ನಿನ್ನ ಜೊತೆಗಿದ್ದಾಗ ಮಾಡಿದ ತಪ್ಪುಗಳೆಲ್ಲವೂ ಅರ್ಥವಾಗಿದೆ. ಪ್ರೀತಿಯ ಬೆಲೆ ತಿಳಿಯಬೇಕು ಅಂದ್ರೆ, ಒಂಟಿಯಾಗಿರಬೇಕು ಅಂತ ಅರ್ಥ ಮಾಡಿಸಿದ್ದಕ್ಕೆ ಥ್ಯಾಂಕ್ಸ್. ನಿನ್ನ ನಿಷ್ಕಲ್ಮಷ ಪ್ರೀತಿಯನ್ನು ಪಡೆಯಲು ಇನ್ನೊಮ್ಮೆ ನನಗೆ ಅವಕಾಶ ಮಾಡಿಕೊಡು. ನೀನಿಲ್ಲದೆ ಬದುಕಿಗೆ ಅರ್ಥವಿಲ್ಲ. ಪ್ಲೀಸ್, ದೂರಾಗಬೇಡ.
-ಶಾರದ ವೀರೇಶ್, ಸಿರುಗುಪ್ಪ