Advertisement

ಆಪ್ತರ ಅಮಾನತು ಆದೇಶ ಮತ್ತೊಮ್ಮೆ ಪರಿಶೀಲಿಸಿ

11:15 PM Oct 19, 2019 | Team Udayavani |

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ತಮ್ಮ ಆಪ್ತರಿಗೆ ನೋಟೀಸ್‌ ನೀಡದೇ ಏಕಾಏಕಿ ಅಮಾನತು ಮಾಡಿರುವುದನ್ನು ಪುನರ್‌ ಪರಿಶೀಲಿಸಬೇಕೆಂದು ಕೇಂದ್ರ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ಮನವಿ ಮಾಡಿದ್ದಾರೆ.

Advertisement

ಶನಿವಾರ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಿ ಎಂದು ಹೇಳಲಾಗಿತ್ತು. ಕೋಲಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಮಾಜಿ ಉಪಾಧ್ಯಕ್ಷ ಖಲೀಲ್ ಎಂಬುವರಷ್ಟೇ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿ ಬದಲಾವಣೆ ಬಗ್ಗೆ ಪ್ರಸ್ತಾಪಿಸಿದ್ದರು. ಉಳಿದವರು ಪಕ್ಷದ ಶಿಸ್ತಿನ ಸಿಪಾಯಿಗಳು. ಆದರೂ ಅವರನ್ನು ಅಮಾನತು ಮಾಡಲಾಗಿದೆ.

ಪಕ್ಷವೇ ಎಲ್ಲದಕ್ಕಿಂತ ದೊಡ್ಡದು ಎಂಬುದು ನನಗೂ ಗೊತ್ತಿದೆ. ಹೀಗಾಗಿ ಪಕ್ಷದ ಕುರಿತು ಮಾತನಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದಿನೇಶ್‌ ಗುಂಡೂರಾವ್‌ಗೆ ಮನವಿ ಮಾಡಲಾಗಿದೆ. ನೋಟಿಸ್‌ ನೀಡದೇ ಏಕಾಏಕಿ ಅಮಾನತು ಮಾಡಿರುವುದು ಸರಿಯಲ್ಲ. ಹೀಗಾಗಿ ಅಮಾನತು ಆದೇಶ ಪುನರ್‌ ಪರಿಶೀಲಿಸಬೇಕೆಂದು ಆಗ್ರಹಿಸಿದರು.

ಬ್ಯಾಲೆಟ್‌ ಪೇಪರ್‌ ಬಳಕೆಯಾಗಲಿ: ಚುನಾವಣೆ ಯಲ್ಲಿ ಇವಿಎಂ ಬದಲು ಬ್ಯಾಲೆಟ್‌ ಪೇಪರ್‌ ಬಳಕೆಗೆ ಆದೇಶಿಸಬೇಕೆಂದು ಕಾಂಗ್ರೆಸ್‌ ಜತೆಗೆ 17 ಪ್ರಾದೇಶಿಕ ಪಕ್ಷಗಳು ರಾಷ್ಟ್ರಪತಿಗೆ ಮನವಿ ಮಾಡಿದ್ದವು. ಪ್ರಪಂಚದ ದೊಡ್ಡ ರಾಷ್ಟ್ರಗಳು ಬ್ಯಾಲೆಟ್‌ ಪೇಪರ್‌ ಬಳಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಇವಿಎಂ ಬಳಸಲಾಗುತ್ತಿದೆ. ಕೇಂದ್ರ ಸರ್ಕಾರದ ನಡೆ ಸಂಶಯಾಸ್ಪದವಾಗಿದೆ. ಪ್ರ

ಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳಿಗೆ ಗೌರವ ಕೊಡಬೇಕು. ಇವಿಎಂ ದುರುಪಯೋಗದ ಬಗ್ಗೆ ಜನರಲ್ಲಿಯೂ ಅನುಮಾನವಿದೆ. ಆದರೂ ಚುನಾವಣೆ ಆಯೋಗ ಇವಿಎಂ ಬದಲಾಯಿಸುತ್ತಿಲ್ಲ. ಇವಿಎಂ ಅನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿ ಕೊಳ್ಳುತ್ತಿದೆ. ಹೀಗಾಗಿ ಕೇಂದ್ರದ ಬಿಜೆಪಿ ನಾಯಕರು ಬ್ಯಾಲೆಟ್‌ ಪೇಪರ್‌ ಬಳಕೆಗೆ ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿದರು.

Advertisement

ವಿ.ಡಿ. ಸಾವರ್ಕರ್‌ಗೆ ಭಾರತ ರತ್ನ ನೀಡುವ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಒಳ್ಳೆಯದಲ್ಲ. ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕು. ಲಕ್ಷಾಂತರ ಜನರಿಗೆ ಶಿಕ್ಷಣ, ಅನ್ನ ದಾಸೋಹ ಮಾಡಿ ಸಮಾಜ ಸೇವೆ ಮಾಡಿದ್ದಾರೆ. ಭಾರತ ರತ್ನಕ್ಕೆ ಶಿವಕುಮಾರ್‌ ಸ್ವಾಮೀಜಿ ಅರ್ಹರು. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿ ಯೂರಪ್ಪಅವರು ಕೇಂದ್ರ ಸರ್ಕಾರದ ಮನವೊಲಿಸಬೇಕು.

ಸಾವರ್ಕರ್‌ಗೆ ಭಾರತ ರತ್ನ ಕೊಡುವಂತಹ ಕೆಟ್ಟ ಕೆಲಸ ಬೇರೆ ಇಲ್ಲ .ಇದು ಮಹಾತ್ಮಾ ಗಾಂಧಿ ಅವರಿಗೆ ದ್ರೋಹ ಮಾಡಿದಂತೆ ಎಂದು ಹೇಳಿದರು. ಕೇಂದ್ರದ ಮಾಜಿ ಗೃಹ ಸಚಿವ ಪಿ.ಚಿದಂಬರಂರನ್ನು ಬಂಧಿಸಬೇಕೆನ್ನುವುದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರಿಯಾಗಿತ್ತು. ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್‌, ಬಲಿಷ್ಠವಾಗಿ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದರು. ಪ್ರಭಾವಿ ನಾಯಕರಾಗಿ ಬೆಳೆಯುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿದರು.

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌, ಸಂಪೂರ್ಣವಾಗಿ ರಾಜಕೀಯದಲ್ಲಿದ್ದವರು. ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಪರಮೇಶ್ವರ್‌ ಅವರ ತಂದೆ 50 ವರ್ಷದಿಂದ ಕಟ್ಟಿ ಬೆಳೆಸಿದ್ದರು. ಅದನ್ನು ಪರಮೇಶ್ವರ್‌ ಸಹೋದರ ನೋಡಿಕೊಳ್ಳುತ್ತಿದ್ದರು. ಅವರ ನಿಧನದ ನಂತರ ಪರಮೇಶ್ವರ್‌ ಅದನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಈ ದಾಳಿಗಳೆಲ್ಲವು ರಾಜಕೀಯ ಪ್ರೇರಿತವಾಗಿವೆ. ಕೂಡಲೇ ಇದನ್ನು ನಿಲ್ಲಿಸದಿದ್ದರೆ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋನಿಯಾ ಸಲಹೆ ಮೇರೆಗೆ ಸಿದ್ದುಗೆ ಬೆಂಬಲ: ಮುಂಬರುವ ಉಪಚುನಾವಣೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಗೆ ಸಂಪೂರ್ಣ ಬೆಂಬಲ ನೀಡಲಾಗುವುದು. ಪಕ್ಷದಲ್ಲಿ ಹಿರಿಯರ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಿದ್ದರಾಮಯ್ಯಗೆ ಯಾವ ರೀತಿಯ ಸೂಚನೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಉಪಚುನಾವಣೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವುದು ಸಿದ್ದರಾಮಯ್ಯಗೆ ಬಿಟ್ಟಿದ್ದು. ಸೋನಿಯಾ ಗಾಂಧಿಯವರ ಸಲಹೆಗೆ ಬೆಲೆ ಕೊಟ್ಟು ಸಿದ್ದರಾಮಯ್ಯ ಅವರಿಗೆ ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಬೆಂಬಲಿಸುವುದಾಗಿ ಮುನಿಯಪ್ಪ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next