Advertisement
ಸುಳ್ಯದ ಮಕ್ಕಳ ತಜ್ಞ ಡಾ| ಬಿ.ಎನ್. ಶ್ರೀಕೃಷ್ಣ ಅವರು ತನ್ನ ಮನೆಯ ಗೇಟಿನಲ್ಲಿ ಈ ರೀತಿಯ ಬ್ಯಾನರ್ ಅನ್ನು ಅಳವಡಿಸಿದ್ದಾರೆ. ಮತ ಯಾಚಿಸುವವರು ದಯವಿಟ್ಟು ಓದಿ ಎನ್ನುವ ತಲೆ ಬರಹದೊಂದಿಗೆ ಆರಂಭವಾಗುವ ಬ್ಯಾನರ್‌ನಲ್ಲಿ ರಾಷ್ಟ್ರದ ರಕ್ಷಣೆ ಮತ್ತು ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಲಾರೆ, ಭಾರತದ ಸಂಸ್ಕೃತಿ ಮತ್ತು ಪರಂಪರೆಗೆ ಪೂರ್ತಿ ಬದ್ಧನಾಗಿದ್ದು, ದ್ವಂದ್ವ ನೀತಿ ಅನುಸರಿಸಲಾರೆ, ಕ್ರಿಮಿನಲ್ಸ್, ಭಯೋತ್ಪಾದಕರು, ದೇಶದ್ರೋಹಿಗಳು, ಭ್ರಷ್ಟಾಚಾರಿಗಳನ್ನು ಬೆಂಬಲಿಸಲಾರೆ, ಭ್ರಷ್ಟಾಚಾರ ಮಾಡಲಾರೆ, ದುಷ್ಟ ದ್ರವ್ಯ ಮುಟ್ಟಲಾರೆ, ಸಮಸ್ತ ಪ್ರಜೆಗಳನ್ನೂ ಒಂದೇ ದೃಷ್ಟಿಯಿಂದ ನೋಡುವೆ, ಪಕ್ಷಪಾತಿ ಧೋರಣೆ ಮಾಡಲಾರೆ, ಸ್ವಚ್ಛತಾ ಅಭಿಯಾನದಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸುವೆ, ಗೋ ರಕ್ಷಣೆ ಮಾಡುತ್ತೇನೆ, ಗೋಹತ್ಯೆ ನಿಷೇಧ ಮಾಡುತ್ತೇನೆ, ಜನ ಸೇವೆಯ ಸೋಗಿನಲ್ಲಿ ದ್ವಂದ್ವ ನೀತಿ ಮಾಡಲಾರೆ, ಜನರ ಬೇಡಿಕೆ ಮತ್ತು ಭಾವನೆಗಳಿಗೆ ಸ್ಪಂದಿಸುತ್ತೇನೆ. ಇದಕ್ಕೆ ನಾನು ಮತ್ತು ನನ್ನ ಪಕ್ಷ ಬದ್ಧವಾಗಿದ್ದು ತಮ್ಮ ಅಮೂಲ್ಯ ಮತಗಳನ್ನು ಪಡೆಯಲು ಒಳಗೆ ಬರುತ್ತೇನೆ ಎಂದು ಮತ ಯಾಚಿಸುವವರು ಭರವಸೆ ನೀಡಬೇಕು ಎನ್ನುವ ಒಕ್ಕಣೆಯ ಬ್ಯಾನರ್ ಅನ್ನು ಸುಳ್ಯ ನಗರದ ತನ್ನ ಮನೆಯ ಗೇಟ್ ನಲ್ಲಿ ಅಳವಡಿಸಲಾಗಿದೆ.
ಚುನಾವಣೆ ಘೋಷಣೆಯಾದ ಸಂದರ್ಭ ಗೇಟಿನಲ್ಲಿ ಈ ರೀತಿಯ ಬ್ಯಾನರ್ ಅಳವಡಿಸುವುದು ಇದು ಎರಡನೇ ಬಾರಿ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಅವರು ಇದೇ ರೀತಿಯ ಬ್ಯಾನರ್ ಅಳವಡಿಸಿದ್ದರು. ಆದರೆ ವಿಷಯಗಳು ಮತ್ತು ಷರತ್ತುಗಳು ಬದಲಾಗುತ್ತದೆ. ವಿಧಾನಸಭೆಯ ಚುನಾವಣೆಯಲ್ಲಿ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಆದ್ಯತೆ ನೀಡಲಾಗುತ್ತದೆ. ಕನ್ನಡ ಭಾಷೆ, ಸಂಸ್ಕೃತಿಗೆ ಬದ್ಧನಾಗಿದ್ದು ದ್ವಂದ್ವ ನೀತಿ ಅನುಸರಿಸಲಾರೆ, ಕನ್ನಡ ಮಾಧ್ಯಮದಲ್ಲೇ ಮಕ್ಕಳಿಗೆ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮಾಡಿಸುತ್ತೇನೆ ಮತ್ತಿತರ ಷರತ್ತಗಳನ್ನು ಒಪ್ಪಬೇಕು ಎನ್ನುವುದಾಗಿ ಅಂದು ಅಳವಡಿಸಿದ ಬ್ಯಾನರ್‌ನಲ್ಲಿ ಹೇಳಲಾಗಿತ್ತು. ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ವಿಚಾರಗಳಿಗೆ ಒತ್ತು ನೀಡಲಾಗಿದೆ. ಮುಂದೆ ನಗರ ಪಂಚಾಯಿತ್ ಚುನಾವಣೆಯ ಸಂದರ್ಭ ಸ್ಥಳೀಯ ವಿಚಾರಗಳಿಗೆ ಆದ್ಯತೆ ನೀಡಲಾಗುವುದು ಎನ್ನುವುದು ಡಾ| ಶ್ರೀಕೃಷ್ಣ ಅವರ ಅಭಿಪ್ರಾಯ.