ನವದೆಹಲಿ: ಸಂಸತ್‌ಗೆ ಅರ್ಜಿ ಸಲ್ಲಿಸಿ, ಅಲ್ಲಿ ಆಗಿರುವ ಚರ್ಚೆಗಳ ಬಗ್ಗೆ ಸಮಾಲೋಚನೆ ನಡೆಸಲು ನಾಗರಿಕರಿಗೆ ಅವಕಾಶ ಕಲ್ಪಿಸುವಂಥ ಸೂಕ್ತ ವ್ಯವಸ್ಥೆಯನ್ನು ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಕೆ.ಎಂ.ಜೋಸೆಫ್ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ, ಅರ್ಜಿಯ ಒಂದು ಪ್ರತಿಯನ್ನು ಕೇಂದ್ರ ಸರ್ಕಾರದ ವಕೀಲರಿಗೆ ಸಲ್ಲಿಸುವಂತೆ ಅರ್ಜಿದಾರ ಕರಣ್ ಗಾರ್ಗ್ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಫೆಬ್ರವರಿಗೆ ಮುಂದೂಡಿತು.
ಜನರಿಗೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚೆ ಹಾಗೂ ಸಮಾಲೋಚನೆ ನಡೆಸುವಂತೆ ಕೋರಿ ನೇರವಾಗಿ ಸಂಸತ್ತಿಗೆ ಅರ್ಜಿ ಸಲ್ಲಿಸುವುದು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಂವಿಧಾನ ಕಲ್ಪಿಸಿರುವಂಥ ಮೂಲಭೂತ ಹಕ್ಕು ಎಂದು ಘೋಷಣೆಯಾಗಬೇಕು.
ಮತ ಚಲಾಯಿಸಿ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದ ಬಳಿಕ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಾಗರಿಕರಿಗೆ ಅವಕಾಶವೇ ಇಲ್ಲದಂತಾಗಿದೆ.
ಸಂಸತ್‌ನಲ್ಲಿ ಜನಸಾಮಾನ್ಯನ ಧ್ವನಿಯೂ ಮೊಳಗಬೇಕೆಂದರೆ, ನೇರವಾಗಿ ಅರ್ಜಿ ಸಲ್ಲಿಸುವ ಅವಕಾಶ ಸಿಗಬೇಕು ಎಂದು ಅರ್ಜಿದಾರರು ಕೋರಿದ್ದಾರೆ.