ನವದೆಹಲಿ : ಉತ್ತರಾಖಂಡ್ ಜೋಶಿಮಠ ಪ್ರದೇಶದಲ್ಲಿ ಭೂಮಿ ಮುಳುಗಡೆಯಾಗಿರುವುದು ಮತ್ತು ಹಲವೆಡೆ ಮನೆಗಳಲ್ಲಿ ಬಿರುಕು ಉಂಟಾಗಿರುವ ಆತಂಕದ ನಡುವೆಯೇ ಬಿಕ್ಕಟ್ಟಿನ ಕುರಿತು ಪ್ರಧಾನಿ ಕಾರ್ಯಾಲಯವು ಭಾನುವಾರ ಮಧ್ಯಾಹ್ನ ಉನ್ನತ ಮಟ್ಟದ ಸಭೆ ನಡೆಸಿದೆ.
ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರು ಸಂಪುಟ ಕಾರ್ಯದರ್ಶಿ, ಕೇಂದ್ರ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಜೋಶಿಮಠದಲ್ಲಿ ಬಿರುಕು ಬಿಟ್ಟಿರುವ ಮನೆಗಳು ಹಾಗೂ ಕಟ್ಟಡಗಳ ಬಗ್ಗೆ ಖುದ್ದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಸ್ಥಳೀಯರ ಮನೆಗಳಿಗೆ ಕೂಡ ಭೇಟಿ ನೀಡಿ, ಅವರ ಜತೆಗೆ ಕುಳಿತು ಮಾತನಾಡಿ ಧೈರ್ಯ ತುಂಬಿದ್ದಾರೆ.
ಜೋಶಿಮಠ ಮುಳುಗಡೆ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಸಂತ್ರಸ್ತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಜೋಶಿಮಠದ 3000 ಕ್ಕೂ ಹೆಚ್ಚು ಜನರ ಸಂಕಷ್ಟಗಳನ್ನು ಎತ್ತಿ ಹಿಡಿದ ಮನವಿಯಲ್ಲಿ, ನಿರಂತರ ಭೂಮಿ ಕುಸಿತದಿಂದಾಗಿ ಕನಿಷ್ಠ 570 ಮನೆಗಳಲ್ಲಿ ಬಿರುಕುಗಳು ಉಂಟಾಗಿವೆ ಎಂದು ಹೇಳಲಾಗಿದೆ.