ಬೆಂಗಳೂರು: ರಾಜ್ಯದಲ್ಲಿ ಕ್ಯಾಸಿನೋಗಳಿಗೆ ಅನುಮತಿ ನೀಡಿದರೆ ಪ್ರವಾಸೋದ್ಯಮ ಸಚಿವ ಸಿ. ಟಿ.ರವಿ ಮನೆ ಮುಂದೆ ಅನಿರ್ದಿಷ್ಟಾವಧಿ ಇಸ್ಪೀಟ್ ಆಡಲು ಕರ್ನಾಟಕ ಕಿಸಾನ್ ಕಾಂಗ್ರೆಸ್ ನಿರ್ಧರಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ, ರಾಜ್ಯದ ಹಲವಾರು ಜಿಲ್ಲೆಗಳು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ, ಪ್ರವಾಹ ಪರಿಸ್ಥಿತಿ ಬಂದು ಉತ್ತರ ಕರ್ನಾಟಕದ ಜನರ ಜೀವನವನ್ನೇ ಕಸಿದುಕೊಂಡಿದೆ.
ರಾಜ್ಯದಲ್ಲಿ ರೈತರು ಸಾಲದ ಬಡ್ಡಿ, ಚಕ್ರಬಡ್ಡಿ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕ್ಯಾಸಿನೋ ರವಿಯವರ ತವರು ಜಿಲ್ಲೆ ಚಿಕ್ಕಮಗಳೂರಿನಲ್ಲಿ ಕಾರ್ಮಿಕರು ಕಟ್ಟಿದ ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟದಿಂದ ನೂರಾರು ಜನ ಕಾರ್ಮಿಕರ ಕುಟುಂಬಗಳು ಬೀದಿಗೆ ಬಂದು ನಿಲ್ಲುವಂತಾಗಿದೆ. ಈ ಬಗ್ಗೆ ಯೋಚಿಸುವ ಬದಲು ಕ್ಯಾಸಿನೋ ವಿಚಾರದಲ್ಲಿ ಸಚಿವರು ಮಗ್ನರಾಗಿದ್ದಾರೆ.
ಒಂದು ವೇಳೆ ಕ್ಯಾಸಿನೋ ಸ್ಥಾಪಿಸಲೇಬೇಕು, ವಿದೇಶಿ ಪ್ರವಾಸಿಗರನ್ನು ಸೆಳೆಯಲೇಬೇಕು ಎನ್ನುವ ಉದ್ದೇಶ ರಾಜ್ಯ ಸರ್ಕಾರ ಹೊಂದಿದ್ದರೆ. ಕ್ಯಾಸಿನೋ ಕೇಂದ್ರಗಳನ್ನು ಸರ್ಕಾರವೇ ತೆರೆಯಲಿ, ಸರ್ಕಾರವೇ ಸಿಬ್ಬಂದಿಗಳನ್ನು ನೇಮಿಸಿಕೊಂಡು ನಡೆಸಲಿ.
ಅದನ್ನು ಬಿಟ್ಟು ಖಾಸಗಿಯವರಿಗೆ ಕ್ಯಾಸಿನೋ ಆರಂಭಿಸಲು ಅವಕಾಶ ಕೊಡುವ ವಿಚಾರದಲ್ಲಿ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ. ಸಚಿವರು ರಾಜ್ಯದ ಸಮಸ್ಯೆಗಳನ್ನು ಪರಿಹರಿಸುವ ಕಡೆಗೆ ಗಮನ ಕೊಡದೇ ಕ್ಯಾಸಿನೋ ಆರಂಭಿಸಲು ಮುಂದಾದರೆ, ಅವರ ಮನೆಯ ಮುಂದೆ ಅನಿರ್ಧಿಷ್ಟಾವಧಿ ಇಸ್ಪೀಟ್ ಆಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.