ಚೆನ್ನೈ: ಕಬಡ್ಡಿ ಆಡುತ್ತಿರುವ ವೇಳೆ ವಿದ್ಯಾರ್ಥಿಯೊಬ್ಬ ಆಟದ ಮೈದಾನದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಬಳಿಯ ಮನ್ನಾಡಿಕುಪ್ಪಂ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿ ವಿಮಲ್‌ರಾಜ್ (22) ಮೃತ ದುರ್ದೈವಿ.
ಸೇಲಂ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಪ್ರಾಣಿಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ ವಿಮಲರಾಜ್ ವಾರಾಂತ್ಯಕ್ಕೆ ಮನೆಗೆ ಬಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಿನ್ನೆ ಸಂಜೆ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಮುರಟ್ಟು ಕಾಳಾಯಿ ತಂಡವನ್ನು ಪ್ರತಿನಿಧಿಸುತ್ತಿದ್ದರು.
ವಿಮಲ್ ರೈಡ್ ಮಾಡುತ್ತಿದ್ದ ವೇಳೆ, ಎದುರಾಳಿ ತಂಡದ ಸದಸ್ಯರು ಅವರನ್ನು ಎಳೆದು ಕೆಳಗೆ ಬೀಳಿಸಿದ್ದಾರೆ. ಬಳಿಕ ಮೇಲಕ್ಕೇಳಲು ಪ್ರಯತ್ನಿಸುತ್ತಿರುವ ವೇಳೆ ಮತ್ತೆ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ವಿಮಲ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ತನ್ನ ಒಪ್ಪಿಗೆ ಇಲ್ಲದೆ ಮದುವೆಯಾದ ಮಗಳು ಮತ್ತು ಅಳಿಯನನ್ನು ಕೊಂದ ತಂದೆ
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವಿಲ್ಲುಪುರಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗೆಳೆಯನ ಅಗಲಿಕೆಯ ನೋವಿನ ನಡುವೆ ಮೈದಾನಕ್ಕಿಳಿದ ಮುರುಟ್ಟು ಕಾಳೈ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದ್ದು ವಿಶೇಷ. ಅಷ್ಟೇ ಅಲ್ಲದೆ ಗೆದ್ದ ಟ್ರೋಫಿಯೊಂದಿಗೆ ವಿಮಲ್ ರಾಜ್ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ ಎಂದು ತಿಳಿದುಬಂದಿದೆ.