ರಾಜಕೋಟ್: ವಿಜಯ್ ಹಜಾರೆ ಟ್ರೋಫಿ ಕೂಟದ ನಾಕೌಟ್ ಹಂತದ ಪಂದ್ಯಗಳು ನಡೆಯುತ್ತಿದೆ. ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕರ್ನಾಟಕ, ತಮಿಳುನಾಡು, ಹರ್ಯಾಣ ಮತ್ತು ರಾಜಸ್ಥಾನ ತಂಡಗಳು ಗೆದ್ದು ಸೆಮಿ ಫೈನಲ್ ಪ್ರವೇಶಿಸಿದೆ.
ಬಂಗಾಳದ ಆಲ್ ರೌಂಡರ್ ಶಹಬಾಜ್ ಅಹಮದ್ ಅವರು ಹರ್ಯಾಣ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ನಿಂದ ಮಿಂಚಿದರು. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಆಟಗಾರನಾಗಿದ್ದ ಶಹಬಾಜ್ ಅಹಮದ್ ಅವರನ್ನು ಇತ್ತೀಚೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಟ್ರೇಡ್ ಮಾಡಲಾಗಿತ್ತು.
ಹರ್ಯಾಣ ವಿರುದ್ಧದ ಪಂದ್ಯದಲ್ಲಿ ಸಂಕಷ್ಟದ ಸ್ಥಿತಿಯಲ್ಲಿದ್ದ ಬಂಗಾಲ ತಂಡವನ್ನು ಶಹಬಾಜ್ ಆಧರಿಸಿದರು. 118 ಎಸೆತ ಎದುರಿಸಿದ ಶಹಬಾಜ್ ಭರ್ತಿ ನೂರು ರನ್ ಬಾರಿಸಿದರು. ಈ ಇನ್ನಿಂಗ್ಸ್ ನಲ್ಲಿ ಅವರು ನಾಲ್ಕು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಬಾರಿಸಿದರು.
ಇದನ್ನೂ ಓದಿ:IPL 2024 Auction: ಇಲ್ಲಿದೆ ಆಟಗಾರರ ಸಂಪೂರ್ಣ ಪಟ್ಟಿ; 2 ಕೋಟಿ ಮೂಲಬೆಲೆಯಲ್ಲಿ 3 ಭಾರತೀಯರು
ಶಹಬಾಜ್ ಪ್ರಯತ್ನದ ಹೊರತಾಗಿಯೂ ಬಂಗಾಲ ತಂಡವು ಪಂದ್ಯದಲ್ಲಿ ಸೋಲನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಬಂಗಾಲ 225 ರನ್ ಗಳಿಸಿದರೆ, ಹರ್ಯಾಣ ತಂಡವು 45 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಶಹಬಾಜ್ ನಾಲ್ಕು ಸೀಸನ್ ಗಳಲ್ಲಿ ಆರ್ ಸಿಬಿ ತಂಡದ ಪರವಾಗಿ ಆಡಿದ್ದರು, ಆದರೆ ಕೆಲ ದಿನಗಳ ಹಿಂದೆ ಅವರನ್ನು ಹೈದರಾಬಾದ್ ತಂಡಕ್ಕೆ ಟ್ರೇಡ್ ಮಾಡಲಾಗಿದೆ. ಶಹಬಾಜ್ ಬದಲಿಗೆ ಹೈದರಾಬಾದ್ ತಂಡದ ಮಯಾಂಕ್ ದಾಗರ್ ಆರ್ ಸಿಬಿಗೆ ಬಂದಿದ್ದಾರೆ.