Advertisement

ಬ್ಯಾಡ್ಮಿಂಟನ್‌ನಲ್ಲಿ ಆ ದಿನ ಧೋನಿ ಆದೆ

05:48 PM Aug 30, 2020 | Karthik A |

ಆಟ ಅಂದರೆ ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ ಹೇಳಿ?

Advertisement

ಬಾಲ್ಯದ ಜೀವನವನ್ನು ಅನುಭವ ಎಂಬ ಬುಟ್ಟಿಯಲ್ಲಿ ಹೆಣೆಯಲಾಗಿರುತ್ತದೆ.

ನನಗೆ ಆಟಗಳೆಂದರೆ ಬಾಲ್ಯದಿಂದಲೂ ತುಂಬಾ ಇಷ್ಟ. ನಾನು ಬ್ಯಾಡ್ಮಿಂಟನ್‌ ಆಟಗಾರ್ತಿಯಾಗಿದ್ದೆ. ಈಗಲೂ ಸಮಯ ಸಿಕ್ಕಾಗ ಬ್ಯಾಡ್ಮಿಂಟನ್‌ ಆಡುತ್ತೇನೆ.

ನಾನು ಒಂಭತ್ತನೇ ತರಗತಿಯಲ್ಲಿರಬೇಕಾದರೆ ದೇಶಿಯ ತಂಡಕ್ಕೆ ಆಟಗಾರನ್ನು ಆಯ್ಕೆ ಮಾಡಲಾಗುತ್ತಿತ್ತು. ವಾರದ ಮುಂಚೆಯೇ ನನಗೆ ಈ ಬಗ್ಗೆ ತಿಳಿದಿತ್ತು. ನನಗೆ ಸ್ವಲ್ಪ ಭಯ ಇತ್ತು.

ನನ್ನ ಬಳಿ ಸೂಕ್ತ ಶರ್ಟ್‌, ಪ್ಯಾಂಟ್‌ ಇರಲಿಲ್ಲ. ನನ್ನ ಆಟದ ಸಾಮರ್ಥ್ಯದ ಬಗ್ಗೆ ಸ್ವಲ್ಪ ಹಿಂಜರಿಕೆ ಇತ್ತು. ನನಗೆ ಗೆಳೆಯನೊಬ್ಬ ಶರ್ಟ್‌ ತಂದುಕೊಟ್ಟ. ಮನೆಯಲ್ಲಿ ಪ್ಯಾಂಟ್‌ ಕೊಂಡುಕೊಂಡೆ. ಅಲ್ಲಿಂದ ಶುರುವಾಯಿತು ನನ್ನ ಕ್ರೀಡಾ ಪಯಣ.

Advertisement

ಆಯ್ಕೆಗೆಂದು ಹೊಸಪೇಟೆಗೆ ಹೊಗಬೇಕಿತ್ತು. ಅಲ್ಲಿ ದೊಡ್ಡ ಮೈದಾನ, ಹೊಸ ಹೊಸ ಮುಖಗಳು, ಅವರ ಸ್ಪರ್ಧಾ ತಯಾರಿ ಕಂಡು ನನಗೆ ಒಳಗೊಳಗೆ ಅಳುಕು ಶುರುವಾಯಿತು. ಉಸಿರು ಉಮ್ಮಳಿಸಿ ಬಂದು ಕೊನೆಗೆ ಅಳುತ್ತಾ ಕುಳಿತುಬಿಟ್ಟೆ. ಬಳಿ ಬಂದ ಶಿಕ್ಷಕರೊರ್ವರು, “ಯಾಕಮ್ಮ ಅಳುತ್ತಿದ್ದೀಯಾ? ನೀನು ಚೆನ್ನಾಗಿ ಆಡುತ್ತೀಯಾ’ ಎಂದು ಧೈರ್ಯ ತುಂಬಿದರು. ಅವರು ಮಾತು ಮುಂದುವರಿಸಿ, “ನೋಡಮ್ಮ ನಿನಗೆ ಆಟಗಾರರಲ್ಲಿ ಯಾರಿಷ್ಟ? ಎಂಬ ಪ್ರಶ್ನೆಗೆ “ಧೋನಿ’ ಎಂದು ಉತ್ತರಿಸಿದೆ. ಅಷ್ಟು ಕೇಳಿ ಅವರು ಮುಂದೆ ಹೋದರು. ಆ ಉಪನ್ಯಾಸಕರು ಆಡಿದ ಮಾತುಗಳಿಂದ ಸಮಾಧಾನವಾಗಿ, ಅಳು ನಿಂತು ನನಗೆ ಆತ್ಮಸ್ಥೈರ್ಯ ಹೆಚ್ಚಿತು.

ಆಟ ಶುರುವಾಯಿತು. ನನ್ನನ್ನು ಮಾತನಾಡಿಸಿದವರು ಆಯ್ಕೆ ಸಮಿತಿಯಲ್ಲಿದ್ದರು. ಸ್ವಲ್ಪ ಭಯವಾಗಿ ಇವರು ನನ್ನ ಬಗ್ಗೆ ಏನೆಂದು ತಿಳಿದುಕೊಂಡರೊ ಎಂದೆನಿಸಿತು. ಸಂಜೆ ಆಯ್ಕೆಯಾದವರ ಹೆಸರನ್ನು ಪ್ರಕಟಿಸುವ ಸಮಯ ಬಂದೇ ಬಿಟ್ಟಿತು.

8 ಜನರ ಪೈಕಿ ಮೊದಲ 5 ಜನರಲ್ಲಿ ನನ್ನ ಹೆಸರು ಇಲ್ಲದಿರುವಾಗ ನನಗೆ ಸ್ಪಲ್ಪ ನಿರಾಸೆ ಉಂಟಾಯಿತು. ಇನ್ನು 7 ಜನ ಹೆಸರನ್ನು ಕೂಗಿದಾಗಲೂ ನಾನು ಮಾತ್ರ ಆಯ್ಕೆಯಾಗಲಿಲ್ಲ. ಕೊನೆಯ ಒಬ್ಬರ ಹೆಸರನ್ನು ಕೂಗುವಾಗ ನನ್ನಲ್ಲಿ ನಿರಾಸೆಯ ಕಾರ್ಮೋಡ ಕವಿದಿತ್ತು. ಧೋನಿ ಸೆಲೆಕ್ಟಡ್‌ ಅಂತ ಕೂಗಿದಾಗ ಭಯದಲ್ಲಿ ನನಗೆ ಏನೂ ತಿಳಿಯಲಿಲ್ಲ. ಮತ್ತೆ ಮೂರು ಸಲ ಕೂಗಿದ್ರು. ಕೊನೆಯದಾಗಿ ಓಯ್‌ ಧೋನಿ ನೀನೇ ಆಯ್ಕೆ ಆಗಿದ್ದೀಯಾ ಅಂದ್ರು. ನನ್ನ ಖುಷಿಗೆ ಪಾರವೇ ಇರಲಿಲ್ಲ. ತಂಡಕ್ಕೆ ಆಯ್ಕೆಯಾದ ಸಂತೋಷ ಒಂದೆಡೆಯಾದರೆ ನನ್ನ ಹೆಸರೇ ಬದಲಾಯಿಸಿದ್ರಲ್ಲ ಅನ್ನೋ ಖುಷಿ ಇನ್ನೊಂದೆಡೆ. ಅವತ್ತಿನಿಂದ ಇವತ್ತಿನವರೆಗೂ ಆ ಸರ್‌ ನನ್ನನ್ನು ಧೋನಿ ಅಂತಾನೆ ಕರಿಯೋದು.

 ವಿನುತಾ ಹವಾಲ್ದಾರ್‌, ಅಕ್ಕಮಹಾದೇವಿ ಮಹಿಳಾ ವಿವಿ, ವಿಜಯಪುರ 

 

 

Advertisement

Udayavani is now on Telegram. Click here to join our channel and stay updated with the latest news.

Next