Advertisement

ಪ್ಲೇ ಆಫ್ ಸ್ಥಾನ: ರಾಜಸ್ಥಾನ್‌ ವಿರುದ್ಧ ಪಂಜಾಬ್‌ ಸೋತಿದ್ದರಿಂದ ಶುರುವಾಗಿದೆ ತೀವ್ರ ಲೆಕ್ಕಾಚಾರ

02:34 PM Oct 31, 2020 | keerthan |

ಅಬುಧಾಬಿ: ಅದ್ಭುತ ಬ್ಯಾಟಿಂಗ್‌ ಮಾಡಿದರೂ, ಕಳಪೆ ಬೌಲಿಂಗ್‌ ಕಾರಣ ಶುಕ್ರವಾರ ಕಿಂಗ್ಸ್‌ ಇಲವೆನ್‌ ಪಂಜಾಬ್‌ ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಸೋತು ಹೋಯಿತು. ಇನ್ನೊಂದು ಕಡೆ ರಾಜಸ್ಥಾನ್‌ ರಾಯಲ್ಸ್‌ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಪ್ಲೇಆಫ್ ಪೈಪೋಟಿಯಲ್ಲಿ ಉಳಿದುಕೊಂಡಿದೆ. ಪರಿಣಾಮ ಬಾಕಿ 3 ಪ್ಲೇಆಫ್ ಸ್ಥಾನಕ್ಕಾಗಿ 6 ತಂಡಗಳ ನಡುವೆ ಪೈಪೋಟಿ ತೀವ್ರವಾಗಿದೆ. ನೋವಿನ ಸಂಗತಿಯೆಂದರೆ ದೀರ್ಘ‌ಕಾಲದ ನಂತರ ಅದ್ಭುತ ಬ್ಯಾಟಿಂಗ್‌ ಮಾಡಿ 99 ರನ್‌ ಚಚ್ಚಿದ ಕ್ರಿಸ್‌ ಗೇಲ್‌ ವೈಭವ ವ್ಯರ್ಥವಾಗಿದ್ದು.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 185 ರನ್‌ ಗಳಿಸಿತು. ಇದನ್ನು ಹಿಂಬಾಲಿಸಿದ ರಾಜಸ್ಥಾನ್‌ ಕೇವಲ 17.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 186 ರನ್‌ ಗಳಿಸಿತು. ರಾಜಸ್ಥಾನ್‌ ರನ್‌ ಬೆನ್ನತ್ತುವಾಗ ಅಂತಹ ಅದ್ಭುತ ಎನ್ನುವಂತಹ ಬ್ಯಾಟಿಂಗ್‌ ಚಮತ್ಕಾರಗಳನ್ನು ಮಾಡಲಿಲ್ಲ. ಆದರೆ ಸಂಘಟಿತ ಹೋರಾಟದ ಮೂಲಕ ಸುಲಭ ಜಯ ಸಾಧಿಸಿತು. ಬೆನ್‌ ಸ್ಟೋಕ್ಸ್‌ (26 ಎಸೆತ 50 ರನ್‌), ಸಂಜು ಸ್ಯಾಮ್ಸನ್‌ (25 ಎಸೆತ 48 ರನ್‌) ಉತ್ತಮ ಆಟವಾಡಿ ತಂಡವನ್ನು ದಡ ಹತ್ತಿಸಿದರು.

ಗೇಲ್‌ ಆಸ್ಫೋಟ: ಶುಕ್ರವಾರ ನಿಶ್ಚಿತವಾಗಿ ಯುನಿವರ್ಸ್‌ ಬಾಸ್‌ ಕ್ರಿಸ್‌ ಗೇಲ್‌ ದಿನ. ದೀರ್ಘ‌ಕಾಲದ ನಂತರ ಕ್ರಿಸ್‌ ಗೇಲ್‌ ವೈಭವ ನಿಜಕ್ಕೂ ಏನು ಎನ್ನುವುದನ್ನು ತೋರಿಸಿದ ದಿನ. ಅವರ ಅಬ್ಬರದ 99 ರನ್‌ಗಳ ಕಾರಣ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್‌ ಸವಾಲಿನ ಮೊತ್ತ ಪೇರಿಸಿತು. 2019ರ ಐಪಿಎಲ್‌ಗ‌ೂ ಮುನ್ನ ನಡೆದ ಹರಾಜಿನಲ್ಲಿ ಕ್ರಿಸ್‌ ಗೇಲ್‌ ಅವರನ್ನು ಕೊಳ್ಳಲು ಯಾವ ಫ್ರಾಂಚೈಸಿಗಳು ಸಿದ್ಧವಿರಲಿಲ್ಲ. ಕಡೆಯ ಹಂತದಲ್ಲಿ ಪಂಜಾಬ್ ಅವರನ್ನು ಖರೀದಿಸಿತ್ತು. ಆಗ ಉಳಿದ ಫ್ರಾಂಚೈಸಿಗಳು ನಿಟ್ಟುಸಿರುಬಿಟ್ಟಿದ್ದವು. ಒಂದು ಕಾಲದಲ್ಲಿ ಐಪಿಎಲ್‌ ಅನ್ನು ಆಳಿದ್ದ ಗೇಲ್‌ಗೆ ಅದು ಬಹಳ ನೋವಿನ ಗಳಿಗೆಯಾಗಿತ್ತು. ಆ ಐಪಿಎಲ್‌ನಲ್ಲಿ ಗೇಲ್‌ ಉತ್ತಮವಾಗಿಯೇ ಆಡಿದ್ದರು. 2020ರ ಆರಂಭಿಕ ಪಂದ್ಯಗಳಲ್ಲಿ ಅವರ ಬಗೆಗಿನ ಅಪನಂಬಿಕೆಯಿಂದ ಪಂಜಾಬ್‌ ಆಡಲು ಅವಕಾಶವನ್ನೇ ನೀಡಿರಲಿಲ್ಲ. ಕಡೆಗೂ ಒಳಗೆ ಬಂದ ಗೇಲ್‌ ತಂಡದ ಮನಃಸ್ಥಿತಿಯನ್ನೇ ಬದಲಿಸಿದರು.

ಶುಕ್ರವಾರ ಗೇಲ್‌ 63 ಎಸೆತ ನಿಭಾಯಿಸಿ, 6 ಬೌಂಡರಿ, 8 ಸಿಕ್ಸರ್‌ಗಳ ಮೂಲಕ 99 ರನ್‌ ಬಾರಿಸಿದರು. ಹಿಂದಿನ ಪಂದ್ಯಗಳಲ್ಲೂ ಗೇಲ್‌ ಅತ್ಯುತ್ತಮ ಆಟವನ್ನೇ ಆಡಿದ್ದರು. ಆದರೆ ಅದು ಅವರ ಪೂರ್ಣಸಾಮರ್ಥ್ಯದ ದರ್ಶನವಲ್ಲ. ಅದನ್ನು ಪ್ರಕಾಶಿಸಲು ಇಷ್ಟು ಪಂದ್ಯಗಳವರೆಗೆ ಕಾಯಬೇಕಾಯಿತು. ಇನ್ನು ಕೆ.ಎಲ್‌.ರಾಹುಲ್‌ 41 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳಿಂದ 46 ರನ್‌ ಗಳಿಸಿ ಔಟಾದರು. ನಿಕೋಲಸ್‌ ಪೂರನ್‌ ಕೇವಲ 10 ಎಸೆತದಲ್ಲಿ 3 ಸಿಕ್ಸರ್‌ಗಳ ಮೂಲಕ 22 ರನ್‌ ಬಾರಿಸಿದರು. ಪಂಜಾಬ್‌ ಪರ ಜೋಫ್ರಾ ಆರ್ಚರ್‌ 26 ರನ್‌ ನೀಡಿ 2, ಬೆನ್‌ ಸ್ಟೋಕ್ಸ್‌ 32 ರನ್‌ ನೀಡಿ 2 ವಿಕೆಟ್‌ ಪಡೆದರು.

ಪ್ಲೇಆಫ್: ಪಂಜಾಬ್‌, ರಾಜಸ್ಥಾನ್‌ ಸ್ಥಿತಿ

Advertisement

ಶುಕ್ರವಾರದ ಪಂದ್ಯ ಗೆದ್ದಿದ್ದರೆ ಪಂಜಾಬ್‌ ಪ್ಲೇಆಫ್ ಗೇರುವ ಅವಕಾಶ ದಟ್ಟವಾಗಿರುತ್ತಿತ್ತು. ಸೋತ ಪರಿಣಾಮ ರನ್‌ಧಾರಣೆಯಲ್ಲೂ ಕುಸಿದಿದೆ. ಅದಕ್ಕೆ ಅಂತಿಮ ಪಂದ್ಯವಿರುವುದು ಚೆನ್ನೈ ವಿರುದ್ಧ. ಇಲ್ಲಿ ಗೆದ್ದರೆ ಜಯದ ಸಂಖ್ಯೆ 7ಕ್ಕೇರಿ ಪ್ಲೇಆಫ್ ಪೈಪೋಟಿಯಲ್ಲಿ ಉಳಿದು ಕೊಳ್ಳಲಿದೆ. ಒಂದು ವೇಳೆ ಸೋತರೆ, ಹೊರಬೀಳಲಿದೆ. ಆದರೆ ಇಲ್ಲಿ ಅದು ಡೆಲ್ಲಿ, ಕೋಲ್ಕತ, ರಾಜಸ್ಥಾನ್‌ ವಿರುದ್ಧ ಹೋರಾಟ ನಡೆಸಬೇಕು! ಪ್ರಸ್ತುತ ರಾಜಸ್ಥಾನ ಮತ್ತು ಕೋಲ್ಕತ ತಮ್ಮ ಅಂತಿಮ ಪಂದ್ಯದಲ್ಲಿ ಎದುರಾಗಲಿವೆ. ಇವೆರಡರ ನಡುವೆ ಯಾವ ತಂಡ ಗೆಲ್ಲುತ್ತದೋ ಅದರ ಜಯದ ಸಂಖ್ಯೆ 7 ಆಗಲಿದೆ. ರನ್‌ದರ ಕಾಪಾಡಿಕೊಂಡ ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಅವಕಾಶವಿದೆ.

Advertisement

Udayavani is now on Telegram. Click here to join our channel and stay updated with the latest news.

Next