ಅಬುಧಾಬಿ: ರವಿವಾರದ ಎರಡು ಐಪಿಎಲ್ ಪಂದ್ಯಗಳಲ್ಲಿ ಮೂರು ತಂಡಗಳ ಪ್ಲೇ ಆಫ್ ಭವಿಷ್ಯ ನಿರ್ಧಾರವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಪಂಜಾಬ್ ಮುಖಾಮುಖೀಯಾಗಲಿವೆ. ರಾತ್ರಿ ಕೋಲ್ಕತಾ-ರಾಜಸ್ಥಾನ್ ಸೆಣಸಲಿವೆ. ಈ ನಾಲ್ಕೂ ತಂಡಗಳಿಗೆ ಇದು ಕೊನೆಯ ಲೀಗ್ ಪಂದ್ಯವಾಗಿರುವುದರಿಂದ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ.
ಕೆಕೆಆರ್, ಪಂಜಾಬ್, ರಾಜಸ್ಥಾನ್ ತಲಾ 12 ಅಂಕ ಹೊಂದಿವೆ. ಆದರೆ ಈ ಪಂದ್ಯದಲ್ಲಿ ಕೇವಲ ಗೆದ್ದರಷ್ಟೇ ಸಾಲದು, ಜತೆಗೆ ರನ್‌ರೇಟ್ ಕೂಟ ಉತ್ತಮವಾಗಿರಬೇಕು. ಒಂದು ವೇಳೆ ಮೊದಲ ಪಂದ್ಯದಲ್ಲಿ ಪಂಜಾಬ್ ಜಯಿಸಿದರೆ ಇನ್ನೊಂದರಲ್ಲಿ ರಾಜಸ್ಥಾನ್ ಅಥವಾ ಕೆಕೆಆರ್ ಗೆದ್ದರೆ ಆಗ ಎರಡು ತಂಡಗಳ ಅಂಕ 14ಕ್ಕೆ ಏರುತ್ತದೆ. ಆಗ ಉತ್ತಮ ರನ್‌ರೇಟ್ ಹೊಂದಿರುವವರಿಗೆ ಲಾಭವಾಗಲಿದೆ.
ರವಿವಾರದ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಪಂಜಾಬ್ ಎಡವಿದರೆ ಕೂಟದಿಂದ ನಿರ್ಗಮಿಸಲಿದೆ. ಆದರೆ ಇದರಿಂದ ಧೋನಿ ಪಡೆಗೆ ಯಾವುದೇ ಲಾಭವಾಗದು. ಅದು ಈಗಾಗಲೇ ನಿರ್ಗಮಿಸಿದೆ. ಆದರೆ ಗೆದ್ದು ಪಂಜಾಬನ್ನು ಹೊರದಬ್ಬಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಬ್ಯಾಟ್ ಎಸೆದ ಗೇಲ್‌ಗೆ ದಂಡ
ಅಬುಧಾಬಿ: ಶುಕ್ರವಾರದ ರಾಜಸ್ಥಾನ್ ಎದುರಿನ ಪಂದ್ಯದಲ್ಲಿ 99 ರನ್ನಿಗೆ ಔಟಾದ ಸಿಟ್ಟಿನಲ್ಲಿ ಬ್ಯಾಟ್ ಎಸೆದ ಕ್ರಿಸ್ ಗೇಲ್ ವರ್ತನೆ ಎಲ್ಲ ದಿಕ್ಕುಗಳಿಂದಲೂ ಟೀಕೆಗೊಳಗಾಗಿತ್ತು. ಐಪಿಎಲ್ ನೀತಿಸಂಹಿತೆ ಉಲ್ಲಂ ಸಿದ ಕಾರಣಕ್ಕಾಗಿ ಅವರಿಗೀಗ ಪಂದ್ಯದ ಸಂಭಾವನೆಯ ಶೇ. 10ರಷ್ಟು ದಂಡ ವಿಧಿಸಲಾಗಿದೆ.
ಶತಕದ ಹಾದಿಯಲ್ಲಿದ್ದ ಗೇಲ್, ಅಂತಿಮ ಓವರಿನಲ್ಲಿ ಆರ್ಚರ್ ಎಸೆತಕ್ಕೆ ಬೌಲ್ಡ್ ಆಗಿದ್ದರು. ಬ್ಯಾಟ್ ಎಸೆದು ವಾಪಸಾಗುವಾಗ ಆರ್ಚರ್‌ಗೆ ಹಸ್ತಲಾಘವ ಮಾಡುವುದನ್ನು ಗೇಲ್ ಮರೆಯಲಿಲ್ಲ. ಕೊನೆಗೆ ಮ್ಯಾಕ್ಸ್‌ವೆಲ್ ಈ ಬ್ಯಾಟನ್ನು ತಂದು ಗೇಲ್‌ಗೆ ನೀಡಿದ್ದರು.