“ಆಡಿಸಿ ನೋಡು ಬೀಳಿಸಿ ನೋಡು …’ ಎಂಬ “ಕಸ್ತೂರಿ ನಿವಾಸ’ ಚಿತ್ರದ ಹಾಡು ಇಂದಿಗೂ ಜನಜನಿತ. ಮೊನ್ನೆ ಮೊನ್ನೆಯಷ್ಟೇ ತೆರೆಕಂಡ “ರಾಜಕುಮಾರ’ ಚಿತ್ರದಲ್ಲೂ “ಆಡಿಸಿಯೇ ನೋಡು ಬೀಳಿಸಿಯೇ ನೋಡು…’ ಹಾಡು ಪುನಃ ಧ್ವನಿಸಿದ್ದು ಮತ್ತೂಂದು ವಿಶೇಷ. ಈಗ ಇದೇ ಶೀರ್ಷಿಕೆಯಡಿ ಸಿನಿಮಾವೂ ಸೆಟ್ಟೇರಿದೆ.
ಹೌದು, “ಆಡಿಸಿ ನೋಡು ಬೀಳಿಸಿ ನೋಡು’ ಎಂಬ ಸಿನಿಮಾ ಈಗಾಗಲೇ ಶೇ.70 ರಷ್ಟು ಚಿತ್ರೀಕರಣ ಮುಗಿಸಿದೆ. ಈ ಚಿತ್ರದ ಮೂಲಕ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಕಾಲಿಟ್ಟಿವೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಚಿತ್ರಕ್ಕೂ “ಕಸ್ತೂರಿ ನಿವಾಸ’ ಚಿತ್ರದ “ಆಡಿಸಿ ನೋಡು ಬೀಳಿಸಿ ನೋಡು’ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ.
ಈ ಚಿತ್ರದ ಮೂಲಕ ಮನೋಜ್ ಶ್ರೀ ಹರಿ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ಇವರು “ಕೇರ್ ಆಫ್ ಫುಟ್‌ಪಾತ್’ ಚಿತ್ರಕ್ಕೆ ಸಂಗೀತ ನೀಡಿದ್ದರು. ಈಗ ಕಥೆ, ಚಿತ್ರಕಥೆ, ಹಾಡು, ಸಂಭಾಷಣೆ ಬರೆದು ನಿರ್ದೇಶಕರಾಗಿದ್ದಾರೆ. ಇದಷ್ಟೇ ಅಲ್ಲ, ಸಂಗೀತ, ನೃತ್ಯನಿರ್ದೇಶನ, ಸಂಕಲನ, ವಿಎಫ್ಎಕ್ಸ್ ಹಾಗೂ ಕ್ಯಾಮೆರಾ ಕೆಲಸವನ್ನೂ ಒಬ್ಬರೇ ನಿರ್ವಹಿಸಿದ್ದಾರೆ.
ಅಲ್ಲಿಗೆ ಸಕಲಕಲಾವಲ್ಲಭ ಎಂದು ನಿರೂಪಿಸಲು ಹೊರಟಿದ್ದಾರೆ. ಇರಲಿ, ಈ ಚಿತ್ರದ ಕಥೆ ಇಷ್ಟು, ಇದೊಂದು ಸಿನಿಮಾ ಕುರಿತ ಕಥೆ. ಸಿನಿಮಾ ಮಾಡುವುದರಿಂದ ಅದರ ಉಪಯೋಗ ಮತ್ತು ದುರುಪಯೋಗದ ಕುರಿತು ಒಂದಷ್ಟು ವಿಷಯಗಳನ್ನು ಹೇಳಹೊರಟಿದ್ದಾರಂತೆ ನಿರ್ದೇಶಕರು.
ಒಂದು ಸಿನಿಮಾದಿಂದ ಒಳ್ಳೆಯದ್ದೂ ಆಗುತ್ತೆ, ಕೆಟ್ಟದ್ದೂ ಆಗುತ್ತೆ. ಅದನ್ನು ಹೇಗೆ ಸ್ವೀಕರಿಸಬೇಕು ಎಂಬ ವಿಷಯ ಈ ಚಿತ್ರದಲ್ಲಿ ಅಡಗಿದೆಯಂತೆ. ಈಗಾಗಲೇ ಶೇ.70 ರಷ್ಟು ಚಿತ್ರೀಕರಣ ಮಾಡಿದೆ ಚಿತ್ರತಂಡ. ಬಹುತೇಕ ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗಿದೆಯಂತೆ. ಒಂದೊಳ್ಳೆಯ ಸಂದೇಶ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದು, ಈಗಿನ ಯೂತ್ಸ್ಗೆ ಬೇಕಾದ ಎಲ್ಲಾ ಅಂಶಗಳು ಇಲ್ಲಿರಲಿವೆಯಂತೆ.
ಈ ಚಿತ್ರವನ್ನು ಮನುಗೌಡ ನಿರ್ಮಿಸುತ್ತಿದ್ದಾರೆ. ಇದು ಇವರಿಗೆ ಮೊದಲ ಸಿನಿಮಾ. ಇನ್ನು, ಇವರಿಗೆ ಶಿವಪ್ರಸಾದ್ ಮತ್ತು ಮೋಹನ್ ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ. ಚಿತ್ರದಲ್ಲಿ ಐವರು ನಾಯಕರು, ಇಬ್ಬರು ನಾಯಕಿಯರಿದ್ದಾರೆ. ನಟ ಧನಂಜಯ್ ಅವರ ಸಹೋದರ ಸಂಬಂಧಿ ಆದಿ, ಯೋಗರಾಜ್, ಸೋಮಗೌಡ, ಮಂಜುನಾಥ್ ಮತ್ತು ಸುನೀಲ್ ಈ ಐವರು ನಾಯಕಿರಿಗೂ ಇದು ಮೊದಲ ಅನುಭವ.
ನಾಯಕಿಯರಾದ ಕಾವ್ಯಾಗೌಡ ಮತ್ತು ಡಾ.ನಿಸರ್ಗ ಅವರಿಗೂ ಇದು ಚೊಚ್ಚಲ ಚಿತ್ರ. ಈ ಚಿತ್ರದಲ್ಲಿ ಮೋಹನ್ ಗೌಡ ಖಳನಟರಾಗಿ ನಟಿಸುತ್ತಿದ್ದಾರೆ. ಎಲ್ಲರಿಗೂ ಇದು ಹೊಸ ಅನುಭವ. ಚಿತ್ರದ ಆಡಿಯೋ ಸಿಡಿ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರತಂಡ, ಮೇ 17 ರಂದು ಹಾಡುಗಳನ್ನು ಹೊರತರಲಿದೆ. ಜೆಸ್ಸಿಗಿಫ್ಟ್, ಚಂದನ್‌ಶೆಟ್ಟಿ, ಸಂತೋಷ್ ವೆಂಕಿ ಹಾಗೂ ಅನುರಾಧ ಭಟ್ ಹಾಡುಗಳನ್ನು ಹಾಡಿದ್ದಾರೆ.