Advertisement

ವೀರಶೈವ-ಲಿಂಗಾಯತರ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು

11:31 AM Jan 06, 2018 | |

ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ತಿಂಗಳಾಂತ್ಯದಲ್ಲಿ ಬೃಹತ್‌ ಸಮಾವೇಶದ ಮೂಲಕ ವೀರಶೈವ-ಲಿಂಗಾಯತರ ಶಕ್ತಿ ಪ್ರದರ್ಶನ ಮಾಡಲು ವೀರಶೈವ-ಲಿಂಗಾಯತ ಹಿತರಕ್ಷಣಾ ವೇದಿಕೆ ನಿರ್ಧರಿಸಿದೆ.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಮಾಜಿ ಶಾಸಕ ಎಚ್‌.ಸಿ.ಬಸವರಾಜು ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ಕಂದಾಯ ವಿಭಾಗದ ಎಂಟು ಜಿಲ್ಲೆಗಳ ವೀರಶೈವ-ಲಿಂಗಾಯತ ಮುಖಂಡರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ನಮ್ಮ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ನಮ್ಮವರಿಗೆ ಟಿಕೆಟ್‌ ನೀಡದಿರುವ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಶಕ್ತಿ ಇದೆ ಎಂಬುದನ್ನು ತೋರಿಸಿದರೆ 2025ರ ಚುನಾವಣೆಗೆ ಕರೆದು ಟಿಕೆಟ್‌ ಕೊಡುವ ಪರಿಸ್ಥಿತಿ ಬರುತ್ತೆ ಎಂಬ ಸಲಹೆ ಕೇಳಿಬಂತು.

ಮೂರು ಪಕ್ಷಗಳಿಗೆ ಹಕ್ಕೋತ್ತಾಯ: ಮೈಸೂರು ವಿಭಾಗದಲ್ಲಿ ಬರುವ ಮೈಸೂರು, ಚಾಮರಾಜ ನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ 49 ವಿಧಾನಸಭಾ ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ವೀರಶೈವ-ಲಿಂಗಾಯತರ ಪ್ರಾಬಲ್ಯವಿರುವುದರಿಂದ

ಈ ಕ್ಷೇತ್ರಗಳಲ್ಲಿ ವೀರಶೈವ-ಲಿಂಗಾಯತರಿಗೇ ಟಿಕೆಟ್‌ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಜೆಡಿಎಸ್‌ ರಾಜಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಹಕ್ಕೋತ್ತಾಯ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ನಮ್ಮವರ ಪಕ್ಷಾತೀತವಾಗಿ ಬೆಂಬಲಿಸಿ: ಮಾಜಿ ಶಾಸಕ ಪರಮೇಶ್ವರಪ್ಪ ಮಾತನಾಡಿ, ಪಕ್ಷ ನೋಡದೆ ಗೆಲ್ಲುವ ಅವಕಾಶ ಇರುವಲ್ಲಿ ವೀರಶೈವ-ಲಿಂಗಾಯತ ಅಭ್ಯರ್ಥಿಗಳನ್ನು ಪûಾತೀತವಾಗಿ ಬೆಂಬಲಿಸಬೇಕು. ನಮ್ಮವರು ಗೆಲ್ಲುವುದಷ್ಟೇ ನಮಗೆ ಮುಖ್ಯವಾಗಬೇಕು ಎಂದರು.

ಲಿಂಗಾಯತರ ತುಳಿದ ದೇವೇಗೌಡ: ಮಾಜಿ ಶಾಸಕ ಗುರುದೇವ್‌ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಿಗೆ ನಮ್ಮ ಸ್ವಾಮೀಜಿಗಳನ್ನೂ ಕರೆತಂದು ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ಮಾಡುವ ಮೂಲಕ ರಾಜಕೀಯ ಪಕ್ಷಗಳು ನಮ್ಮತ್ತ ನೋಡುವಂತೆ ಮಾಡಬೇಕಿದೆ.

ನಮ್ಮ ಸಮಾಜದಲ್ಲಿ ಎಲ್ಲಿ ತಪ್ಪಾಗಿದೆ ಎಂಬುದನ್ನು ಕಂಡುಕೊಂಡು ಸರಿಪಡಿಸಬೇಕಿದೆ. ಕ್ಷೇತ್ರ ಪುನರ್‌ ವಿಂಗಡಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಕೇವಲ ಶಿವಮೊಗ್ಗಕ್ಕೆ ಸೀಮಿತರಾಗಿ ವೀರಶೈವ-ಲಿಂಗಾಯತರಲ್ಲಿ ಪ್ರಬಲ ನಾಯಕತ್ವ ಇಲ್ಲದ ಕಾರಣ, ದೇವೇಗೌಡರು ತಂತ್ರಗಾರಿಕೆ ಮಾಡಿ ಇಡೀ ರಾಜ್ಯದಲ್ಲಿ ಲಿಂಗಾಯತರನ್ನು ತುಳಿದಿದ್ದಾರೆ ಎಂದು ದೂರಿದರು.

ಮೀಸಲಾತಿ ಭಿಕ್ಷೆ ಬೇಕಿಲ್ಲ: ಮಾಜಿ ಶಾಸಕ ಎಚ್‌.ಸಿ.ಬಸವರಾಜು ಮಾತನಾಡಿ, ಪûಾತೀತವಾಗಿ ಎಲ್ಲರೂ ಸೇರಿ ತಿಂಗಳಾಂತ್ಯಕ್ಕೆ ಮೈಸೂರಿನಲ್ಲಿ ವಿಭಾಗ ಮಟ್ಟದ ಬೃಹತ್‌ ಸಮಾವೇಶ ಮಾಡೋಣ, ಎರಡನೇ ಹಂತದ ನಾಯಕರನ್ನು ಬೆಳೆಸದಿರುವುದು ನಮ್ಮ ಇಂದಿನ ಈ ಸ್ಥಿತಿಗೆ ಕಾರಣ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ಸಮಾವೇಶಕ್ಕೆ ಜನರನ್ನು ಸೇರಿಸುವ ಜವಾಬ್ದಾರಿ ಹೊರಬೇಕು.

ಮೈಸೂರು ವಿಭಾಗದ 49 ವಿಧಾನಸಭಾ ಕ್ಷೇತ್ರಗಳಿಂದ ತಲಾ 100 ಜನ ಪ್ರಮುಖ ನಾಯಕರನ್ನು ಗುರುತಿಸಿ ಅವರ ಮೂಲಕ ಜನರನ್ನು ಕರೆತರುವಂತಾಗಬೇಕು. ಈ ಸಮಾವೇಶವನ್ನು ಗಂಭೀರವಾಗಿ ತೆಗೆದುಕೊಂಡು ಈ ಭಾಗದಲ್ಲಿ ವೀರಶೈವ-ಲಿಂಗಾಯತರು ಎದ್ದು ನಿಂತರೆ ಯಾವ ನಾಯಕರೂ ಏನು ಮಾಡಲಾಗಲ್ಲ. ಕೆಲ ನಾಯಕರು ಈಗ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ನಮಗೆ ಮೀಸಲಾತಿ ಭಿಕ್ಷೆ ಬೇಕಿಲ್ಲ. ಎಲ್ಲರು ಒಟ್ಟಾಗಿ ಹೋಗೋಣ ಎಂದರು.

ಕ್ಷೇತ್ರ ವಿಂಗಡಿಸಿ ಮೋಸ: ವೇದಿಕೆ ಅಧ್ಯಕ್ಷ ಸಿ.ಪಿ.ತಮ್ಮಣ್ಣ ಮಾತನಾಡಿ, ವೀರಶೈವ-ಲಿಂಗಾಯತರು ಗೆಲ್ಲಬಾರದು ಎಂಬ ದುರುದ್ದೇಶದಿಂದ ನಂಜನಗೂಡು, ವರುಣಾ, ತಿ.ನರಸೀಪುರ ಕ್ಷೇತ್ರಗಳಲ್ಲಿ ವೀರಶೈವ-ಲಿಂಗಾಯತರ ಪ್ರಾಬಲ್ಯವಿದ್ದರು ಕ್ಷೇತ್ರ ಪುನರ್‌ ವಿಂಗಡಣೆ ಸಂದರ್ಭದಲ್ಲಿ ನಂಜನಗೂಡು ಮತ್ತು ತಿ.ನರಸೀಪುರವನ್ನು ಮೀಸಲು ಕ್ಷೇತ್ರ ಮಾಡಲಾಗಿದೆ ಎಂದು ಆರೋಪಿಸಿದರು.

ಮೈಸೂರು ಜಿಲ್ಲೆಯಲ್ಲಿ ಕುರುಬರಿಗೆ ಒಂದು ಸ್ಥಾನ ಕೊಡುವುದು ಕಷ್ಟವಿತ್ತು, ಆದರೆ, ಸಿದ್ದರಾಮಯ್ಯ ಬಂದ ಮೇಲೆ ಐದು ಸ್ಥಾನ ಕೊಡುತ್ತೇವೆ ಅನ್ನುತ್ತಾರೆ. ಇನ್ನು ಮೈಸೂರಿನ ಕೆ.ಆರ್‌.ಕ್ಷೇತ್ರದಲ್ಲಿ ಬ್ರಾಹ್ಮಣರ ಪ್ರಾಬಲ್ಯವಿಲ್ಲದಿದ್ದರು ಅವರಿಗೇ ಟಿಕೆಟ್‌ ನೀಡಲಾಗುತ್ತದೆ ಎಂದು ದೂರಿದರು.

ವೇದಿಕೆಯ ಕೋಶಾಧ್ಯಕ್ಷ ಯು.ಎಂ.ಪ್ರಭುಸ್ವಾಮಿ ಉಡಿಗಾಲ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವ ಸ್ವಾಮಿ, ಕಾರ್ಯದರ್ಶಿ ಸಿ.ಎಂ.ಪ್ರಕಾಶ್‌, ಮಹಿಳಾ ವಿಭಾಗದ ಅಧ್ಯಕ್ಷೆ ಕುಮುದ ಮೊದಲಾದವರು ಸಭೆಯಲ್ಲಿ ಮಾತನಾಡಿದರು. ಎಂಟೂ ಜಿಲ್ಲೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next