ಬೆಂಗಳೂರು: ಅನರ್ಹಗೊಂಡ ಹದಿನೇಳು ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರ ವಿರುದ್ಧ ಅವರವರ ಕ್ಷೇತ್ರದಲ್ಲಿ ಹೋರಾಟ ನಡೆಸುವ ಕುರಿತಂತೆ ವಿವಿಧ ಪ್ರಗತಿಪರ ಸಂಘಟನೆಯ ಮುಖಂಡರು ಸಭೆ ನಡೆಸಿದರು. ಶಾಸಕರ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಸಂಬಂಧ ಯುವಕರನ್ನೊಳಗೊಂಡ ದೊಡ್ಡ ಜನಾಂದೋಲನ ರೂಪಿಸುವ ಕುರಿತು ಚರ್ಚೆ ನಡೆಸಿದರು.
ಸ್ವಾತಂತ್ರ್ಯಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ, ಕಾಂಗ್ರೆಸ್ ಮುಖಂಡ ಆರ್.ವಿ.ಸುದರ್ಶನ್, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಸಾಹಿತಿ ಪ್ರೊ. ಮರುಳಸಿದ್ಧಪ್ಪ, ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ವಿಮರ್ಶಕ ಜಿ.ರಾಮಕೃಷ್ಣ , ಬಿ.ಟಿ.ಲಲಿತಾ ನಾಯಕ್, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಜೊತೆಗೆ “ಪ್ರಚಲಿತ ರಾಜ್ಯ ರಾಜಕೀಯ ವ್ಯಾಪಾರೀಕರಣ’ ಕುರಿತಂತೆ ಸಂವಾದ ನಡೆಸಿದರು. ಈ ವೇಳೆ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಜಯಪ್ರಕಾಶ್ ನಾರಾಯಣ್ ಅವರಂತಹ ಐಕಾನ್ ಚಳವಳಿಗಾರರ ಅಗತ್ಯ ಬಹಳಷ್ಟಿದೆ.ಅನರ್ಹಗೊಂಡಿರುವ 17 ಮಂದಿ ಶಾಸಕರು ಜನರಿಗೆ ದ್ರೋಹ ಮಾಡಿದ್ದು, ಈ ಬಗ್ಗೆ ಯುವಕರನ್ನೊಳಗೊಂಡ ಜನಾಂದೋಲನ ರೂಪಿಸಬೇಕಾಗಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಒಂದೇ ದೇಶ, ಒಂದೇ ಆಡಳಿತ ನಡೆಸುವ ನಿಟ್ಟಿನಲ್ಲಿ ವಿದ್ಯಮಾನಗಳು ನಡೆಯುತ್ತಿದೆ. ಸಿಬಿಐ ಸೇರಿದಂತೆ ಸರ್ಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪಕ್ಷಾಂತರ ಮಸೂದೆಯಲ್ಲಿ ಹಲವು ರೀತಿಯ ಲೋಪಗಳಿದ್ದು ಇದಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದರು. ದೇಶದಲ್ಲಿ ಪ್ರಬಲವಾದ ವಿರೋಧ ಪಕ್ಷಗಳು ಇರುವುದು ಬೇಕಾಗಿಲ್ಲ.
ಆ ಹಿನ್ನೆಲೆಯಲ್ಲಿ ಪಕ್ಷಾಂತರ ಕೆಲಸ ನಡೆದಿದೆ. ಆಂಧ್ರಪ್ರದೇಶ, ಕೇರಳ, ಕರ್ನಾಟಕ, ಸಿಕ್ಕಿಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಕೆಲಸಕ್ಕೆ ಬಿಜೆಪಿ ಕೈಹಾಕಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ನಡೆ ಎಂದರು. ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಪಕ್ಷಾಂತರ ತಡೆ ಸಂಬಂಧ ರೈತರು, ಕಾರ್ಮಿಕರು ಮತ್ತು ಯುವ ಸಮೂಹವನ್ನು ಒಳಗೊಂಡ ದೊಡ್ಡ ಮಟ್ಟದಲ್ಲಿ ಜನಾಂದೋಲವನ್ನು ರೂಪಿಸುವ ಅಗತ್ಯವಿದೆ. ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಸಾಹಿತಿ ಪ್ರೊ.ಮರುಳಸಿದ್ಧಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ನಮ್ಮ ಚುನಾವಣೆ ವ್ಯವಸ್ಥೆ ಕೂಡ ಒಂದು ರೀತಿಯಲ್ಲಿ ಇದಕ್ಕೆ ಕಾರಣವಾಗುತ್ತಿದ್ದು, ಚುನಾವಣಾ ಪದ್ಧತಿಯಲ್ಲಿ ಬಹಳಷ್ಟು ಸುಧಾರಣೆಯಾಗಬೇಕಾಗಿದೆ. ಕುಟುಂಬ ರಾಜಕಾರಣಕ್ಕೂ ಲಗಾಮು ಹಾಕಬೇಕಿದೆ ಎಂದು ನುಡಿದರು.