ಮಹಾನಗರ: ಕಾಫಿ ಕಪ್ ಗಳು, ಪಾರ್ಸೆಲ್ ಕವರ್ ಗಳು, ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಉತ್ಪನ್ನ, ಪಾಲಿಥಿನ್ ಕವರ್‌ಗಳು, ಪ್ಲಾಸ್ಟಿಕ್ ತಟ್ಟೆಗಳು, ಸ್ಟ್ರಾಗಳನ್ನು ಇನ್ನು ಮುಂದೆ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಬಳಕೆಗೆ ನಿಷೇಧ ಹೇರುವ ಸಂಭವವಿದೆ. ವಿಶ್ವವಿದ್ಯಾಲಯಗಳ ಅನುದಾನ ಆಯೋಗವು (ಯುಜಿಸಿ) ತನ್ನ ವ್ಯಾಪ್ತಿಯಲ್ಲಿರುವ ಎಲ್ಲ ವಿವಿಗಳನ್ನು ‘ಪ್ಲಾಸ್ಟಿಕ್ ಮುಕ್ತ ವಲಯ’ವನ್ನಾಗಿ ಘೋಷಿಸುವ ಬಗ್ಗೆ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದರಂತೆ ಯುಜಿಸಿ ಅಡಿಯಲ್ಲಿ ಬರುವ ವಿ.ವಿ.ಗಳ ಕ್ಯಾಂಪಸ್ ಪ್ಲಾಸ್ಟಿಕ್ ಮುಕ್ತವಾಗಿ ಪರಿವರ್ತನೆಯಾಗಬೇಕಿದೆ. ಈ ನಿಟ್ಟಿನಲ್ಲಿ ಕೊಣಾಜೆಯಲ್ಲಿರುವ ಮಂಗಳೂರು ವಿ.ವಿ. ಕ್ಯಾಂಪಸ್, ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಮಾಡುವ ಕ್ರಮಕ್ಕೆ ಮುಂದಾಗಲಿದೆ.
Advertisement
ಇದು ಸಾಧ್ಯವಾದರೆ, ಮಂಗಳೂರು ವಿ.ವಿ. ಕ್ಯಾಂಪಸ್ ನಲ್ಲಿ ನಡೆಯುವ ಕಾರ್ಯಕ್ರಮಗಳಿಂದ ಆರಂಭವಾಗಿ, ವಿ.ವಿ. ಕ್ಯಾಂಪಸ್ ಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಬಹುದು. ಒಂದೆರಡು ದಿನದ ಹಿಂದಷ್ಟೇ ಯುಜಿಸಿ ಯಿಂದ ವಿ.ವಿ. ಗೆ ಈ ಕುರಿತು ಪತ್ರ ತಲುಪಿದೆ. ಈ ಕುರಿತು ಮುಂದಿನ ಕ್ರಮಗಳ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ಅನುಷ್ಠನ ಸಂಬಂಧ ಯೋಜನೆಗಳನ್ನು ಕೈಗೊಳ್ಳಬೇಕಿದೆ. ವಿ.ವಿ. ಕ್ಯಾಂಪಸ್ ನ ಕ್ಯಾಂಟೀನ್ ನಲ್ಲಿ ಮಾರಾಟವಾಗುವ ಪ್ಲಾಸ್ಟಿಕ್ ನಲ್ಲಿ ಸಿಗುವ ತಿಂಡಿ ತಿನಿಸುಗಳಿಗೂ ಕಡಿವಾಣ ಬೀಳಲಿದೆ.
ಈವರೆಗೆ ಮಂಗಳೂರು ವಿ.ವಿ. ಕ್ಯಾಂಪಸ್ ನಲ್ಲಿ ಸ್ವಚ್ಛ ಭಾರತ್ ಯೋಜನೆಗೆ ಪೂರಕವಾಗುವ ಚಟುವಟಿಕೆ ಗಳನ್ನು ಆಯೋಜಿಸುತ್ತಾ ಬರಲಾಗಿದೆ. ಪ್ರತೀ ತಿಂಗಳು ಸಂಜೆಯ ನಿಗದಿತ ಸಮಯದಲ್ಲಿ ತನ್ನ ಕ್ಯಾಂಪಸ್‌ನಲ್ಲಿಯೇ ಪ್ಲಾಸ್ಟಿಕ್ ಹೆಕ್ಕುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಸಂಗ್ರಹವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ಥಳೀಯ ತ್ಯಾಜ್ಯ ಸಾಗಾಟ ವಾಹನಗಳ ಮೂಲಕ ವಿಲೇವಾರಿ ಮಾಡಲಾಗುತ್ತಿದೆ. ಜತೆಗೆ ಸ್ವಚ್ಛ ಭಾರತ್ ಯೋಜನೆಯಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಕೂಡ ನಡೆದಿದೆ. ಈಗ ಮಂಗಳೂರು ವಿ.ವಿ.ಗೆ ಒಳಪಟ್ಟ ಎಲ್ಲ ಕಾಲೇಜುಗಳ ವ್ಯಾಪ್ತಿಯಲ್ಲೂ ಸ್ವಚ್ಛತಾ ಕಾರ್ಯವನ್ನು ನಡೆಸಲಾಗುತ್ತಿದೆ. ಯುಜಿಸಿಯಿಂದ ಹೊರಡಿಸಲಾದ ಆದೇಶದ ಪ್ರಕಾರ ಎಲ್ಲ ಕಾಲೇಜುಗಳ ಕ್ಯಾಂಪಸ್ ಅನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಘೋಷಿಸುವ ಬಗ್ಗೆ ಉಲ್ಲೇಖವಿಲ್ಲದ ಹಿನ್ನೆಲೆಯಲ್ಲಿ ಸದ್ಯಕ್ಕೆ ಕಾಲೇಜು ಕ್ಯಾಂಪಸ್‌ಗಳು ಈ ಆದೇಶದಿಂದ ಹೊರಗಿದೆ. ಆದರೆ, ತನ್ನ ವ್ಯಾಪ್ತಿಯ ಕಾಲೇಜು ಕ್ಯಾಂಪಸ್ ಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ವಿ.ವಿ. ಸೂಚಿಸಲಿದೆ.
Related Articles
– ವಿವಿ ಕ್ಯಾಂಪಸ್‌ನಲ್ಲಿ ಪ್ಲಾಸ್ಟಿಕ್ ಸಂಬಂಧಿತ ಎಲ್ಲ ವಸ್ತುಗಳ ಬಳಕೆ ನಿಷೇಧ
– ಸ್ವಚ್ಛ ಭಾರತ ಅಭಿಯಾನದಡಿ ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜನೆ
– ಪ್ಲಾಸ್ಟಿಕ್ ಬಾಟಲ್‌ಗಳ ಬದಲಾಗಿ ಮರುಬಳಕೆ ಮಾಡಬಹುದಾದ ಲೋಹದ ಬಾಟಲಿಗಳ ಬಳಕೆಗೆ ಉತ್ತೇಜನ
– ಪರಿಸರ ಜಾಗೃತಿಗಾಗಿ ಮ್ಯಾರಥಾನ್ ಆಯೋಜನೆ
– ಪರಿಸರ ಜಾಗೃತಿ ಕುರಿತು ಬೀದಿ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ
– ಕಾಡುಗಳ ನಾಶ ಕುರಿತು ಕಾಲೇಜು/ವಿವಿ ಮಟ್ಟದ ಕಾರ್ಯಕ್ರಮ ಆಯೋಜನೆ
– NCC, NSS, ಇಕೋ ಕ್ಲಬ್‌ಗಳ ಸಹಯೋಗದೊಂದಿಗೆ ಸಾಮೂಹಿಕ ಜಾಗೃತಿ
Advertisement
ಮಂಗಳೂರು ವಿ.ವಿ.ಯಲ್ಲಿ ಕ್ರಮವಿಶ್ವವಿದ್ಯಾಲಯಗಳ ಅನುದಾನ ಆಯೋಗವು ತನ್ನ ವ್ಯಾಪ್ತಿಯಲ್ಲಿರುವ ಎಲ್ಲ ವಿವಿಗಳನ್ನು ‘ಪ್ಲಾಸ್ಟಿಕ್ ಮುಕ್ತ ವಲಯ’ವನ್ನಾಗಿ ಘೋಷಿಸುವ ಬಗ್ಗೆ ಇತ್ತೀಚೆಗೆ ಕಳುಹಿಸಿದ ಆದೇಶ ಮಂಗಳೂರು ವಿ.ವಿ.ಗೆ ದೊರಕಿದೆ. ಇದರಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
– ಪ್ರೊ| ನಾಗೇಂದ್ರ ಪ್ರಸಾದ್, ಕುಲಸಚಿವರು